ರಶ್ಮಿಕಾರನ್ನು ಹುಡುಕಿಕೊಂಡು ಹೈದರಾಬಾದ್ನಿಂದ ವಿರಾಜಪೇಟೆಗೆ ಬಂದಿದ್ದ ಅಭಿಮಾನಿ
ತೆಲುಗು ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟಿ ರಶ್ಮಿಕಾ ಮಂದಣ್ಣ ಅವರನ್ನು ಭೇಟಿಯಾಗಲು ಕೊಡಗಿನ ವಿರಾಜಪೇಟೆಯವರೆಗೂ ಹೈದರಾಬಾದ್ನ ಅಭಿಮಾನಿಯೊಬ್ಬ ಹುಡುಕಿಕೊಂಡು ಬಂದ ಪ್ರಸ್ಂಗ ನಡೆದಿದೆ. ಆಕಾಶ್ ತ್ರಿಪಾಠಿ ಎಂಬಾತನೇ ಆ ಹುಚ್ಚು ಅಭಿಮಾನಿ.
ರಶ್ಮಿಕಾ ಅಮಿತಾಬ್ ಬಚ್ಚನ್ ಅವರ ಗುಡ್ಬೈ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ಮಿಷನ್ ಮಜ್ನು ಕೂಡ ರಶ್ಮಿಕಾ ಕೈಯಲ್ಲಿದೆ. ಬಾಲಿವುಡ್ ನ ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದು, ರಶ್ಮಿಕಾ ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ.
ಮೂಲತಹ ವಿರಾಜಪೇಟೆಯವರಾದ ರಶ್ಮಿಕಾ ಅಲ್ಲಿಯೇ ಇರುತ್ತಾರೆಂದು ತಿಳಿದು, ಹೈದರಾಬಾದ್ ನಿಂದ ಮೈಸೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಗೂಡ್ಸ್ ಆಟೋದಲ್ಲಿ ವಿರಾಜಪೇಟೆಗೆ ಭೇಟಿ ನೀಡಿದ್ದ ಈ ಅಭಿಮಾನಿ. ಬಳಿಕ ರಶ್ಮಿಕಾ ಮನೆ ಹುಡುಕಲು ದಿನಪೂರ್ತಿ ಅಲೆದಾಡಿದ್ದ.
ಮನೆ ಹುಡುಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಅತನನ್ನು ವಿಚಾರಿಸಿದ ಬಳಿಕ ಹೈದರಾಬಾದ್ ನಿಂದ ರಶ್ಮಿಕಾರನ್ನು ನೋಡಲು ಬಂದಿರುವುದಾಗಿ ತಿಳಿದುಬಂದಿದೆ. ಪೊಲೀಸರು ಆತನಿಗೆ ಬೈದು ಬುದ್ಧಿವಾದ ಹೇಳಿ ಹೈದರಾಬಾದ್ ಗೆ ಕಳುಹಿಸಿದ್ದಾರೆ.
ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಶ್ಮಿಕಾ, ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂಬ ನೋವು ನನ್ನಲ್ಲಿ ಇದೆ. ಆದರೆ ಇಂಥ ಸಾಹಸ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ನನ್ನ ಗಮನಕ್ಕೆ ಈಗ ಬಂತು. ನಿಮ್ಮಲ್ಲಿ ಒಬ್ಬರು ತುಂಬಾ ದೂರ ಪ್ರಯಾಣ ಮಾಡಿ ನನ್ನನ್ನು ನೋಡಲು ಮನೆಗೆ ಹೋಗಿದ್ದಾರೆ. ದಯವಿಟ್ಟು ಹೀಗೆ ಮಾಡಬೇಡಿ. ನಿಮ್ಮನ್ನು ಭೇಟಿಯಾಗಿಲ್ಲ ಎನ್ನುವ ನೋವು ನನಗಿದೆ. ಒಂದು ದಿನ ಖಂಡಿತ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೀಗ ಪ್ರೀತಿ ತೋರಿಸಿ ಎಂದು ಹೇಳಿದ್ದಾರೆ.