ರಾಷ್ಟ್ರಪ್ರಶಸ್ತಿ ವಿಜೇತನಿಗೆ ನೋ ಶ್ರದ್ಧಾಂಜಲಿ ಸಭೆ!

ಪೂರ್ಣ ವಿ-ರಾಮ
ಕನ್ನಡ ಚಿತ್ರರಂಗದ ಕೇಂದ್ರಬಿಂದು ಮತ್ತು ಬಿಂಬ ಎಂದರೆ ಅದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ವರ್ಷಾನುವರ್ಷ ಇತಿಹಾಸ ಇರುವ ವಾಣಿಜ್ಯಮಂಡಳಿಯಲ್ಲಿ ಆಗಾಗ ಸಭೆ ಸಮಾರಂಭ ಕಾಫಿ ಟಿ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಅಂಥ ಮಹಾನ್ ಹೆಸರಿರೋ ಸೌತ್ ಇಂಡಿಯಾದಲ್ಲೇ ಒಳ್ಳೇ ಸ್ಥಾನ ಗಳಿಸಿರೋ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ತೀರಾ ಇತ್ತೀಚೆಗೆ ಒಂದು ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಇತ್ತೀಚೆಗೆ ಅಂದರೆ ಕೋವಿಡ್ ಕಾರಣಕ್ಕೆ ತುತ್ತಾಗಿ ಮೃತಪಟ್ಟ ಹಿರಿಯ ಜೀವಗಳನ್ನ ಸ್ಮರಿಸುವ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಅಲ್ಲಿ ಕೋಟಿ ನಿರ್ಮಾಪಕ ರಾಮು, ಹಿರಿಯ ಪ್ರೊಡ್ಯೂಸರ್ ಕೆಸಿಎನ್ ಚಂದ್ರಶೇಖರ್ ಹಾಗೂ ಇನ್ನೊಬ್ಬ ದೊಡ್ಡ ನಿರ್ಮಾಪಕ ಬಿಂದಾಸ್ ಚಂದ್ರಶೇಖರ್ ಅವರ ಸ್ಮರಣಾರ್ಥ ಫೋಟೋ ಇಟ್ಟು ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಲಾಯಿತು.
ಡೀಯರ್ ವಾಣಿಜ್ಯ ಮಂಡಳಿ ಇದೆಂಥಾ ನಿರ್ಲಕ್ಷ್ಯ?!
ಅದೇನೋ ಓಕೆ. ಆದರೆ ಇಂಥ ಸಂದರ್ಭದಲ್ಲಿ ಮೊನ್ನೆ ತಾನೇ ಮೃತಪಟ್ಟ ದೇಶವೇ ಮೆಚ್ಚಿದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಫೋಟೋ ಇರಲಿ, ಹೆಸರು ಕೂಡ ಹೇಳದೇ ಇರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಹಾಗಾದರೆ ವಿಜಯ್ ಸಾಧನೆ ಇವರೆಲ್ಲರ ಮುಂದೆ ಶೂನ್ಯವಾಗಿಬಿಟ್ಟಿತಾ? ಅಥವಾ ಇದು ಬೇಕೆಂತಲೇ ಕೆಲವರು ತೋರಿರುವ ನೆಗ್ಲಿಜನ್ಸಿಯಾ? ವಿಜಯ್ ಅವರ ಮಿಂಚಿನ ಸಂಚಾರದ ಬಗ್ಗೆ ಇವರ್ಯಾರಿಗೂ ಅರಿವೇ ಇಲ್ಲದೆ ಹೋಯಿತಾ?
ಲಿಂಗದೇವರು ಬೇಸರ!
ಹಿರಿಯ ನಿರ್ದೇಶಕ ಲಿಂಗದೇವರು ಈ ಕುರಿತು ಬೇಸರ ವ್ಯಕ್ತಪಡಿಸಿದ್ದು, ಕೊಂಚ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಮಂಡಳಿ ಅಂದರೆ ಅದು ಕೇವಲ ನಿರ್ಮಾಪಕರಿಗೆ ಸೀಮಿತವಾಗಿಲ್ಲ. ರಾಮು ಮೊದಲಾದವರನ್ನು ಸ್ಮರಿಸಿದ್ದು ತಪ್ಪು ಅಂತ ಹೇಳುತ್ತಿಲ್ಲ. ಆದರೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಮತ್ತು ಛಾಪು ಮೂಡಿಸಿರುವ ಒಬ್ಬ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರೋ ಕನ್ನಡದ ಹುಡುಗನನ್ನ ಸ್ಮರಿಸದೇ ಇರುವುದು ಅವರ ಬೇಸರದ ಮೂಲ ಕಾರಣವಾಗಿದೆ. ಸಾರಾ ಗೋವಿಂದು, ಜೈರಾಜ್ ಮೊದಲಾದ ಹಿರಿಕರು ಇದ್ದೂ ವಿಜಿಯವರ ಫೋಟೋ ಇಡಲು ಯಾಕೆ ತಾತ್ಸಾರ ತೋರಿದರು? ಯಾಕೆ ಅವರನ್ನು ಸ್ಮರಿಸಲು ಮರೆತರು ಎನ್ನುವುದು ಇದೀಗ ಚರ್ಚೆಯ ವಿಷಯವೂ ಆಗಿದ್ದು, ವಾಣಿಜ್ಯ ಮಂಡಳಿಯ ಈ ನಿರ್ಲಕ್ಷ್ಯಕ್ಕೆ ಲಿಂಗದೇವರು ಬೇಸರದಿಂದ ಮಾತನಾಡಿದ್ದಾರೆ!