ಪಾರ್ವತಮ್ಮ – ರಾಜ್ ಸಾರ್ಥಕ ದಾಂಪತ್ಯ!

-ಪೂರ್ಣ ವಿ-ರಾಮ
ಇಂದು ವರನಟ ಹಾಗೂ ವರದಾನ ನಿರ್ಮಾಪಕಿ ಪಾರ್ವತಮ್ಮ ದಂಪತಿಯ ವಿವಾಹ ವಾರ್ಷಿಕೋತ್ಸವ. ಅದೊಂದು ಸಮೃದ್ಧ ದಾಂಪತ್ಯ. ಸಾರ್ಥಕ ದಾಂಪತ್ಯ. ಸಕ್ಸಸ್ ಫೂಲ್(ಹಿಂದಿ ಪದ-ಹೂವು) ದಾಂಪತ್ಯ. ಒಬ್ಬ ಗಂಡಿನ ಏಳಿಗೆ ಹಿಂದೆ ಒಬ್ಬಾಕೆ ಸಮರ್ಥ ಹೆಣ್ಣುಮಗಳು ಇದ್ದಾಳೆ ಎನ್ನುವುದಕ್ಕೆ ಜೀವಂತ ಉದಾಹರಣೆ ರಾಜಣ್ಣ-ಪಾರು!
ಶೀ ಈಸ್ ದೊಡ್ಮನೆ ಪಾರ್ವತಮ್ಮ!
ಒಂದು ಕಡೆ ಚಿತ್ರ ನಿರ್ಮಾಣ, ಇನ್ನೊಂದು ಕಡೆ ಮನೆ ಮ್ಯಾನೇಜ್ ಮೆಂಟ್, ಮಗದೊಂದು ಕಡೆ ಮಕ್ಕಳ ಕೇರಿಂಗ್, ಆ ಕಡೆ ಅಣ್ಣಾವ್ರ ಜೋಪಾನ ಮಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಪಾರ್ವತಮ್ಮ ಮೇಲೆ ರಾಜಣ್ಣನಿಗೆ ಅಪರಿಮಿತ ಗೌರವ ಮತ್ತು ಕುಲಗೌರವ ಇತ್ತು. ಇಬ್ಬರ ನಡುವೆ ಸಾಮರಸ್ಯದ ಕೊರತೆ ಎಂದೂ ಕಾಡಲಿಲ್ಲ!
ಆರಂಭದಲ್ಲಿ ಕಷ್ಟಪಟ್ಟಿದ್ದರು ರಾಜ್ – ಪಾರು!
ಪೂರ್ಣ ಪ್ರಮಾಣದ ಪೂರ್ಣಿಮಾ ಎಂಟರ್ ಪೈಸರ್ಸ್, ವಜ್ರೇಶ್ವರಿ ಸಂಸ್ಥೆ ಶುರು ಮಾಡುವುದಕ್ಕೂ ಮುನ್ನ ಈ ಜೋಡಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿತ್ತು. ಯಜಮಾನರಿಗೆ ಪಾತ್ರ ಫಿಕ್ಸ್ ಆಗಿಬಿಟ್ಟಿತು ಎನ್ನುವ ಹಂತದಲ್ಲಿ ಅದು ಕೈ ತಪ್ಪಿ ಹೋಗಿದ್ದಿದೆ. ನಿರ್ಮಾಣ ಮಾಡಿದವರು ಲಾಭ ಗಳಿಕೆ ಆದರೂ ಅಣ್ಣಾವ್ರ ಸಿನೆಮಾ ಲಾಸ್ ಆಯಿತು ಎಂದಾಗಲೂ ಹೌದಾ ಎಂದು ತಲೆ ಆಡಿಸಿದ್ದಿದೆ. ಕೊನೆಗೆ ಸತ್ಯ ಗೊತ್ತಾಗಿ ತಾವೇ ನಿರ್ಮಾಣ ಮಾಡೋಣ ಎಂಬ ಧೃಡ ಸಂಕಲ್ಪ ಮಾಡಿ, ಅಲ್ಲಿಯೂ ಗೆದ್ದು ತೋರಿದ ರಾಜ್ ಪಾರ್ವತಮ್ಮ, ಜೊತೆಜೊತೆಗೆ ಜೀವನ ಪಯಣ ಸಾಗಿಸಿದರು. ಇಬ್ಬರಿಗೂ ದಾದಾ ಸಾಹೇಬ್ ಫಾಲ್ಕೆ ಬಂದಿದೆ. ಇಬ್ಬರ ಹೆಸರಲ್ಲೂ ರಸ್ತೆ ಇದೆ. ಇಬ್ಬರಿಗೂ ಡಾಕ್ಟರೇಟ್ ಗೌರವ ಸಂದಾಯವಾಗಿದೆ. ಇವತ್ತು ಇಬ್ಬರೂ ಅಕ್ಕ ಪಕ್ಕದಲ್ಲೇ ಸಮಾಧಿ ರೂಪದಲ್ಲಿ ಕೈ ಕೈ ಹಿಡಿದೇ ಮಲಗಿದ್ದಾರೆ. ಇದನ್ನೇ ಅಲ್ಲವೇ ಸಾರ್ಥಕ ದಾಂಪತ್ಯ ಎನ್ನುವುದು!?
ಅದೇ ದಿವ್ಯ ಜೋಡಿಗೆ, ಭವ್ಯ ಜೋಡಿಗೆ, ಜನುಮದ ಜೋಡಿಗೆ ಹ್ಯಾಪಿ ಆನಿವರ್ಸರಿ!