ರಣವೀರ್ ಸಿಂಗ್ ‘ನೀಲಿ’ ಚಿತ್ರ!

ಪೂರ್ಣ ವಿ-ರಾಮ
ರಣವೀರ್ ಸಿಂಗ್ ಇರೋದೇ ವಿಚಿತ್ರ. ಚಿತ್ರ ವಿಚಿತ್ರ ಬಟ್ಟೆ ಹಾಕಿಕೊಂಡು ಫೋಸ್ ಕೊಡುವುದರಲ್ಲಿ ಈ ಯಪ್ಪ ಮೊದಲಿಂದ ಜಗತ್ ಫೇಮಸ್. ಅದರಲ್ಲೂ ದೀಪಿಕಾ ಪಡುಕೋಣೆಯನ್ನ ಕಟ್ಟಿಕೊಂಡ ನಂತರವಂತೂ ಇವರಿಬ್ಬರು ವಾರಕ್ಕೊಂದು ಬಟ್ಟೆ ಹಾಕಿಕೊಂಡು ಫೋಸ್ ಕೊಡುತ್ತಾರೆ. ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಖುಷಿಪಡ್ತಾರೆ. ಅದಕ್ಕೆ ಸಾವಿರಾರು ಕಾಮೆಂಟ್ಸ್ ಬಿದ್ದಿರುವುದನ್ನು ನೋಡಿ ಸಂಭ್ರಮಿಸ್ತಾರೆ.
ಅದೇ ರೀತಿ ಇದೀಗ ರಣವೀರ್ ಇದೀಗ ಇನ್ನೊಂದು ವಿಚಿತ್ರ ಡ್ರೆಸ್ ಹಾಕಿಕೊಂಡು ಸುದ್ದಿಯಾಗಿದ್ದಾರೆ. ನೀಲಿ ಬಣ್ಣದ ಡ್ರೆಸ್ ತೊಟ್ಟು, ವಿಚಿತ್ರ ರೀತಿಯ ಟೊಪ್ಪಿಯೊಂದಿಗೆ ಫೋಸ್ ಕೊಟ್ಟು ಮತ್ತೆ ನ್ಯೂಸ್ ರೂಮ್ ನ ಹೆಡ್ ಲೈನ್ಸ್ ಪಟ್ಟಿ ಸೇರಿದ್ದಾರೆ ದೀಪಿಕಾ ಪಡುಕೋಣೆಯ ಭರ್ಜರಿ ಗಂಡ!
ಇಷ್ಟುದ್ದ ಕೂದಲು, ಕುತ್ತಿಗೆ ಸುತ್ತಿದ ಚೈನು!
ಅದನ್ನು ವಿಚಿತ್ರ ಎನ್ನುವುದೋ, ವಿಭಿನ್ನ ಎಂದು ಚಪ್ಪಾಳೆ ತಟ್ಟುವುದೋ, ಇದೂ ಒಂದು ಅವತಾರವಾ ಎಂದು ಬಾಯಿ ಬಡಿದುಕೊಂಡು ನಗುವುದೋ ಗೊತ್ತಾಗುತ್ತಿಲ್ಲ. ರಣವೀರ್ ಇರೋದೇ ವಿಚಿತ್ರ. ಅಂಥದ್ದರಲ್ಲಿ ಕೇಜಿಗಟ್ಟಲೇ ಬಂಗಾರ, ಫಳಫಳಿಸೋ ವಿಚಿತ್ರ ಬಟ್ಟೆ. ಕೈಯಲ್ಲೊಂದು ಪುಟಾಣಿ ಬ್ಯಾಗು(ಮೋಸ್ಟ್ ಲೀ ದೀಪಿಕಾ ಪಡುಕೋಣೆಯರದ್ದೇ ಇರಬೇಕು) ಅದರ ಜೊತೆಗೆ ಮೈಮೇಲೆ ತಗಲಾಕಿಕೊಳ್ಳಲು ಅದೊಂದು ಕೋಟು. ಜನ ಕೋಟ್ ಹಾಕಿಕೊಳ್ಳುದುವನ್ನ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ರಣವೀರ ವಿಕ್ರಮ ಅದನ್ನ ಹ್ಯಾಂಗರ್ ಗೆ ಬಟ್ಟೆ ನೇತಾಕಿಕೊಂಡಂತೇ ನೇತಾಕಿಕೊಂಡು ದುರು ದುರು ನೋಟ ಬೀರಿದ್ದಾನೆ!
ಇದೊಂಥರಾ ಹುಚ್ಚು ಕ್ರೇಜ್!
ರಣವೀರ್ ಸಿಂಗ್ ಈ ಶೋಕಿಯನ್ನ ಮೊದಲಿಂದ ಮಾಡಿಕೊಂಡು ಬರುತ್ತಿದ್ದಾರೆ. ಡಿಫರೆಂಟ್ ಡಿಫರೆಂಟ್ ಡ್ರೆಸ್ ಹಾಕಿಕೊಂಡು ಅದು ವೈರಲ್ ಆಗುವುದನ್ನೇ ಕಾದು ಕೂತಂತೆ ಕಾಣುವ ರಣಬೀರ್ ಇದೀಗ ನೀಲಿ ಬಟ್ಟೆಯಲ್ಲಿ, ನೀಳಕಾಯದಲ್ಲಿ ಕಳೆತುಂಬಿ ಕಂಗೊಳಿಸುತ್ತಿದ್ದಾರೆ. ಆ ಡ್ರೆಸ್ ಜೊತೆ ಮುಖಕ್ಕೊಂದು ಕನ್ನಡಕ ಬೇರೆ ಸಿಕ್ಕಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಅದು ತ್ರಿಡಿ ಗ್ಲಾಸ್ ಥರ ಇದೆ. ಈ ಎಲ್ಲಾ ರೋಶಾವೇಷ ತುಂಬಿದ ವೇಷ ನೋಡುತ್ತಿದ್ದರೆ ಅದು ಛದ್ಮವೇಷವೋ, ಭಾವಾವೇಷವೋ, ಹಗಲುವೇಷವೋ ಆ ಭಗವಂತನಿಗೇ ಗೊತ್ತು!