ರವಿಚಂದ್ರನ್ಗಾಗಿ ಹಾಡ್ತಾರೆ ಶಿವಣ್ಣ!

ಪೂರ್ಣ ವಿ-ರಾಮ
ರವಿಚಂದ್ರನ್ ಅವರು ತುಂಬಾ ಗ್ಯಾಪ್ ನಂತರ ಒಂದು ವಿಭಿನ್ನ ಕಥಾನಕದ ಚಿತ್ರದಲ್ಲಿ ನಟಿಸುತ್ತಿದ್ದು, ಗಿರಿರಾಜ್ ನಿರ್ದೇಶನದ ಅದೇ ಕನ್ನಡಿಗ ಚಿತ್ರದ ಗೀತೆಯೊಂದನ್ನ ಶಿವರಾಜ್ ಕುಮಾರ್ ಹಾಡಲಿದ್ದಾರೆ!
ಕನ್ನಡ ಲಿಪಿಕಾರನೊಬ್ಬನ ಕಥೆಯುಳ್ಳ ಕನ್ನಡಿಗ ಚಿತ್ರದ ಟೀಸರ್ ನಿಜಕ್ಕೂ ಕುತೂಹಲ ಮೂಡಿಸಿದೆ. ರವಿಚಂದ್ರನ್ ಅಂದರೆ ಅದ್ದೂರಿ ಸೆಟ್, ಹಣ್ಣುಗಳ ರಾಶಿ, ಒಂದಷ್ಟು ಕರ್ಟನ್ ಗಳ ಅಲ್ಲಾಡಿಸುವಿಕೆ, ಇನ್ನೊಂದಷ್ಟು ಸಂಗೀತ ಎಂದುಕೊಂಡಿದ್ದ ಅವರ ಅಭಿಮಾನಿಗಳಿಗೆ ಕನ್ನಡಿಗ ಚಿತ್ರದ ಪಾತ್ರಕ್ಕೆ ಅವರು ಒಪ್ಪಿಕೊಂಡಿರುವುದು ಖಂಡಿತ ಸಂಭ್ರಮ ತಂದಿದೆ. ಹಿಂದೆ ರವಿಮಾಮಾ ದೃಶ್ಯ ಚಿತ್ರ ಒಪ್ಪಿಕೊಂಡಾಗ ಕೂಡ ಸೇಮ್ ಅನಿಸಿಕೆ ಮೂಡಿತ್ತು. ಇದೀಗ ಕನ್ನಡಿಗ ಸಿನೆಮಾ ಕೂಡ ಸಾಕಷ್ಟು ಕೌತುಕ ಮೂಡಿಸಿದೆ. ಜೊತೆಗೆ ಆ ಸಿನೆಮಾದ ಟೈಟಲ್ ಗೀತೆಯನ್ನು ಗೀತಕ್ಕನ ಗಂಡ ಶಿವರಾಜ್ ಕುಮಾರ್ ಹಾಡುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ!
ಕೋದಂಡರಾಮರದು ನಲವತ್ತು ವರ್ಷದ ದೋಸ್ತಿ!
ಶಿವರಾಜ್ ಕುಮಾರ್ & ರವಿಚಂದ್ರನ್ ಅವರದು ನಲವತ್ತು ವರುಷದ ದೋಸ್ತಿ. ಇಬ್ಬರೂ ಒಟ್ಟಿಗೇ ಇಂಡಸ್ಟ್ರಿಗೆ ಬಂದಿದ್ದು. ಕೋದಂದರಾಮ ಎಂಬ ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು. ಆ ಚಿತ್ರ ಅಷ್ಟಕ್ಕಷ್ಟೇ ಓಡಿತು ಎನ್ನುವುದು ಎರಡನೇ ಮಾತಾದರೂ ಇಬ್ಬರನ್ನು ಒಂದು ಪರದೆ ಮೇಲೆ ನೋಡಿ ಕನ್ನಡಿಗರು ಸಂಭ್ರಮಿಸಿದ್ದರು. ಇದೀಗ ಅದೇ ‘ಶ್ರೀಕಂಠ’ ಗೆಳೆಯನ ಚಿತ್ರದ ಶೀರ್ಷಿಕೆ ಗೀತೆಗೆ ಕಂಠ ಕೊಡುತ್ತಿರುವುದು ಕೋದಂಡ & ರಾಮನ ಅಭಿಮಾನಿಗಳಿಗೆ ಕಂಠಮಟ ಸಂಭ್ರಮ ತಂದಿದೆ!