ಸಂಚಾರಿ ವಿಜಿಗೆ ಅಲ್ಲಿ ಸಿಕ್ಕ ಗೌರವ ಇಲ್ಲಿಲ್ಲ!

ಪೂರ್ಣ ವಿ-ರಾಮ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಫ್ರಾಂಕ್ ಲಿನ್ ಥಿಯೇಟರ್ ಮುಂದೆ ಸಂಚಾರಿ ವಿಜಯ್ ಅವರಿಗೆ ಅಂತಿಮ ವಿದಾಯ ಹೇಳಿದೆ. ಆ ಮೂಲಕ ಕನ್ನಡ ನಟನ ಯೋಗ್ಯತೆ ಏನು ಎನ್ನುವುದು ವಿಶ್ವದ ವಿಶಿಷ್ಟ ಮತ್ತು ಬಲಿಷ್ಠ ರಾಷ್ಟ್ರ ಅಮೆರಿಕಕ್ಕೂ ಗೊತ್ತಾಗಿದೆ!
ಸಂಚಾರಿ ವಿಜಯ್ ನೀವು ನಮ್ಮ ಹಾರ್ಟ್ ನಲ್ಲಿ ಸದಾ ಇದ್ದೀರಿ. ನಿಮ್ಮನ್ನ ನಾವು ಖಂಡಿತ ಮರೆಯಲು ಅಸಾಧ್ಯ ಎಂದು ಬರೆದು ಅಂತಿಮ ನಮನ ಸಲ್ಲಿಸಿದೆ. ಆ ಮೂಲಕ ಸಂಚಾರಿ ವಿಜಯ್ ನಟನೆಯ ತಾಕತ್ತು ಏನು ಎನ್ನುವುದನ್ನು ಪ್ರಪಂಚಕ್ಕೆ ಸಾರಿದೆ!
ವಿಜಿ ಯಾರೆಂದು ನಮ್ಮವರಿಗೇ ಗೊತ್ತಿಲ್ಲ!?
ಅಮೆರಿಕಾ ದೇಶಕ್ಕೆ ಸಂಚಾರಿ ವಿಜಯ್ ಕುರಿತು ಇರುವ ಗೌರವ ನಮ್ಮವರಿಗೆ ಇಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗಂತೂ ವಿಜಯ್ ಅವರ ಹೆಸರೇ ನೆನಪಿದ್ದಂತೆ ಕಾಣುತ್ತಿಲ್ಲ. ಕಳೆದ ವಾರ ಇದೇ ಫಿಲಂ ಛೇಂಬರ್ ನಲ್ಲಿ ಒಂದು ಶ್ರದ್ಧಾಂಜಲಿ ಸಭೆ ಇಟ್ಟುಕೊಂಡಿದ್ದರು. ಅಲ್ಲಿ ಕೋವಿಡ್ ನಿಂದ ಮೃತಪಟ್ಟ ನಿರ್ಮಾಪಕರ ಫೋಟೋ ಇಟ್ಟು ಸಂತಾಪ ಸೂಚಿಸಿದ್ದರು. ಆದರೆ ಅಲ್ಲಿ ಸಂಚಾರಿ ವಿಜಯ್ ಅವರ ಫೋಟೋ ಇರಲೇ ಇಲ್ಲ. ಅದೇ ಅಮೆರಿಕದ ಥಿಯೇಟರ್ ಮುಂದೆ ನಮ್ಮ ಹೆಮ್ಮೆಯ ಸಂಚಾರಿ ವಿಜಯ್ ಹೆಸರು ರಾರಾಜಿಸುತ್ತಿದೆ. ಇದು ನಮ್ಮವರ ತಾತ್ಸಾರಕ್ಕೆ ಹಿಡಿದ ಕನ್ನಡಿ ಎಂದಷ್ಟೇ ಹೇಳಬಹುದು. ಒಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ನಮ್ಮ ನಾಡಿನ ನಟನನ್ನು ಸ್ಮರಿಸುವಷ್ಟೂ ಸೌಜನ್ಯ ನಮ್ಮವರಿಗಿಲ್ಲ. ಪರ ರಾಷ್ಟ್ರದವರು ವಿಜಯ್ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಸಂತಾಪ ಸೂಚಿಸುತ್ತಾರೆ. ಇದಕ್ಕೆ ಏನೆನ್ನಬೇಕು ನೀವೇ ಹೇಳಿ…?