
ಹಿಂದೆ ರೀಲ್ಗಳನ್ನು ಬಳಸುವಾಗ ರೀಲ್ ಒಂದು ಸೆಕೆಂಡಿಗೆ 20, 18, 16, 14 ಈ ರೀತಿ ಓಡುತ್ತಿತ್ತು. ಅದಕ್ಕಾಗಿ ಮೊದಲು ಕ್ಯಾಮರಾಗಳಲ್ಲಿ ಕ್ಯಾಮರಾ ರನ್ ಆಗುವ ನಾರ್ಮಲ್ ಮೋಟಾರನ್ನು ತೆಗೆದು ಫಾಸ್ಟ್ಮೋಷನ್ ಮೋಟರನ್ನು ಕೂರಿಸಿ ಕ್ಯಾಮರಾ ರನ್ ಮಾಡುತ್ತಿದ್ದರು. ಆದರೆ ಈಗಿನ ಆಧುನಿಕ ಕ್ಯಾಮರಾಗಳಲ್ಲಿ ಮೋಟರ್ ಚೇಂಜ್ ಮಾಡುವ ತೊಂದರೆಯಿಲ್ಲ. ಕ್ಯಾಮರಾದಲ್ಲಿಯೇ ಈ ಸೌಲಭ್ಯವನ್ನು ನೀಡಲಾಗಿದೆ. ಇದೇ ರೀತಿ ಸ್ಲೋಮೋಷನ್ ಸಹ. ಸ್ಲೋಮೋಷನ್ ಎಂದರೆ ಸಿನಿಮಾದಲ್ಲಿ ದೃಶ್ಯಗಳು ನಿಧಾನಗತಿಯಲ್ಲಿ ಓಡುವುದು. ಇದಕ್ಕಾಗಿ ಕ್ಯಾಮರಾ ರನ್ನಿಂಗ್ ಸ್ಪೀಡನ್ನು 1 ಸೆಕೆಂಡಿಗೆ 24 ಫ್ರೇಮುಗಳಿಗಿಂತ ಹೆಚ್ಚಿಗೆ ಇರಿಸಬೇಕಾಗುತ್ತದೆ. ಅಂದರೆ 48, 72, 96 ಹೀಗೆ ನಮಗೆಷ್ಟು ಬೇಕೊ ಅಷ್ಟು ವೇಗವನ್ನು ಕ್ಯಾಮರಾದಲ್ಲಿ ಇರಿಸಿಕೊಳ್ಳಬಹುದು. ಹೆಚ್ಚು ಹೆಚ್ಚು ಫ್ರೇಮ್ ಓಡಿಸಿದಂತೆ ಫಿಲಂ ಮೂವ್ಮೆಂಟ್ ನಿಧಾನವಾಗುತ್ತ ಹೋಗುತ್ತದೆ. ಈ ತಂತ್ರದ ಬಳಕೆ ಹಾಡಿನಲ್ಲಿ ಅಥವಾ ನಾಯಕನ ವಿಜ್ರಂಬಣೆಗೆ ಬಳಸುವುದನ್ನು ಕಾಣುತ್ತೇವೆ. ಆದರೆ ಒಂದು ನೆನಪಿರಲಿ.. ಸ್ಲೋಮೋಷನ್ನಲ್ಲಿ ಷೂಟ್ ಮಾಡುವಾಗ ಕ್ಯಾಮರಾದಲ್ಲಿಯ ರೀಲ್ ಸಾಮಾನ್ಯಕ್ಕಿಂತ ಎರಡುಮೂರು ಪಟ್ಟು ಹೆಚ್ಚು ಖರ್ಚಾಗುತ್ತದೆ.

ಇನ್ನು ಧಾರಾವಾಹಿಗಳತ್ತ ಗಮನ ಹರಿಸಿದರೆ ಅದೂ ಸಹ ಒಂದು ರೀತಿಯಲ್ಲಿ ಸಿನಿಮಾದಂತೆಯೇ. ಆದರೆ ಅದು ದೊಡ್ಡ ಪರದೆಯಲ್ಲಿ ಅಂದರೆ ಸಿನಿಮಾ ಥಿಯೆಟರಿನಲ್ಲಿ ಬಿಡುಗಡೆಯಾಗುವುದಿಲ್ಲ ಅಷ್ಟೆ! ಆದರೆ ಜನಪ್ರಿಯತೆಯಲ್ಲಿ, ಕೆಲವೊಮ್ಮೆ ಕಲಾತ್ಮಕತೆಯಲ್ಲಿ ಯಾವ ಸಿನಿಮಾಗೂ ಕಡಿಮೆಯಿರುವುದಿಲ್ಲ. ದಿ.ಶಂಕರ್ನಾಗ್ರ ಮಾಲ್ಗುಡಿ ಡೇಸ್ನಿಂದ ಹಿಡಿದು ಜೊತೆಜೊತೆಯಲಿ, ಪಾರು, ಪುಟ್ಟಕ್ಕನ ಮಕ್ಕಳು, ದೊರೆಸಾನಿ, ಹೇಳಿಹೋಗು ಕಾರಣ ಮುಂತಾದ ಹಲವಾರು ಧಾರಾವಾಹಿಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಸೀರಿಯಲ್ಗೆ ಬಳಸುವ ಕ್ಯಾಮರಾ ಬೇರೆ ರೀತಿಯದು. ಅದು ಬಿಟಾ ಅಥವಾ ಡಿವಿ ಕ್ಯಾಮರಾ ಆಗಿರಬಹುದು. ಇವುಗಳಿಗೆ ರೀಲ್ ಬೇಕಾಗುವುದಿಲ್ಲ. ಅರ್ಧಗಂಟೆ, ಒಂದು ಗಂಟೆಯ ಟೇಪುಗಳು ಸಿಗುತ್ತವೆ. ಇವುಗಳ ಬೆಲೆ ಸಹ ಕಡಿಮೆ. ಇವುಗಳನ್ನು ಒಮ್ಮೆ ಶೂಟ್ ಮಾಡಿದ ನಂತರ ಅಳಿಸಿ ಮತ್ತೊಮ್ಮೆ ಅದರ ಮೇಲೆಯೇ ಶೂಟ್ ಮಾಡಬಹುದು!
ಇವೆಲ್ಲಾ ಕಾರಣಗಳಿಂದಾಗಿ ಧಾರಾವಾಹಿ ನಿರ್ಮಾಣ ಸಿನಿಮಾ ನಿರ್ಮಾಣಕ್ಕಿಂತ ಸುಲಭ ಹಾಗೂ ಕಡಿಮೆ ವೆಚ್ಚದಿಂದ ಕೂಡಿದ್ದು ಎನ್ನಬಹುದು. ಇವೆಲ್ಲ ಹಲವು ವರ್ಷಗಳ ಹಿಂದಿನ ಮಾತಾಯಿತು. ಇಂದು ಧಾರಾವಾಹಿ ನಿರ್ಮಾಣಕ್ಕೂ ಸಿನಿಮಾಗಳಿಗೆ ಬಳಸುವ HD ಕ್ಯಾಮರಾಗಳನ್ನೇ ಬಳಸುವುದರಿಂದ ಧಾರಾವಾಹಿಗಳು ಸಿನಿಮಾದ ಗುಣಮಟ್ಟವನ್ನೂ ಮೀರಿಸುವಂತಿವೆ. ಈ ಹೈ ಡೆಫನೆಷನ್ ಕ್ಯಾಮರಾಗಳಲ್ಲಿ ಇಂದು ರೆಡ್ ಕ್ಯಾಮರಾಗಳು ಮುಂಚೂಣಿಯಲ್ಲಿವೆ. ರೆಡ್ ಎಪಿಕ್, ರೆಡ್ ಡ್ರಾಗನ್, ಮುಂತಾದವು. ಇವು ಬಿಟ್ಟರೆ ಸೋನಿ, ಪ್ಯಾನೊಸೋನಿಕ್, ಬ್ಲಾಕ್ ಮ್ಯಾಜಿಕ್ ಮುಂತಾದ ಕ್ಯಾಮರಾಗಳು ಸಹ ಇಂದು ಸಿನಿಮಾ ಹಾಗೂ ಧಾರಾವಾಹಿ ಎರಡಕ್ಕೂ ಬಳಸಲ್ಪಡುತ್ತಿವೆ. ಈ ಕ್ಯಾಮರಾಗಳಲ್ಲಿ ಕಾರ್ಡ್ ಅಥವಾ ಹಾರ್ಡ್ ಡಿಸ್ಕ್ಗಳನ್ನು ಬಳಸುತ್ತಾರೆ.
ಮುಂದುವರೆಯುವುದು..
ಓಂಪ್ರಕಾಶ್ ನಾಯಕ್, BMG24x7ಲೈವ್ಕನ್ನಡ