
ದಾವಣಗೆರೆ: ಶಿವಗಂಗೋತ್ರಿ ದಾವಣಗೆರೆ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಮಾರ್ಚ್ 24ರಂದು ನಡೆಯಲಿದ್ದು, ಈ ಬಾರಿ ಮೇಘಾ ಐದು ಸ್ವರ್ಣದ ಪದಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದ 9 ನೇ ವಾರ್ಷಿಕ ಘಟಿಕೋತ್ಸವ ಮಾ. 24 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲರೂ ಆದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ವಹಿಸುವರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಸಮ-ಕುಲಾಧಿಪತಿಗಳಾದ ಡಾ. ಸಿ.ಎನ್. ಅಶ್ವಥ್ ನಾರಾಯಣ ಉಪಸ್ಥಿತರಿರುವರು. ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ. ಪಿ. ವಿ. ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ವಿ.ವಿ.ಯ ಕುಲಪತಿ ಪ್ರೊ. ಎಸ್.ವಿ. ಹಲಸೆ ತಿಳಿಸಿದರು.
ಒಬ್ಬರು ಮಹಿಳೆ, ನಾಲ್ವರು ಪುರುಷ ಅಭ್ಯರ್ಥಿಗಳು ಸೇರಿದಂತೆ ಐವರಿಗೆ ಮಾಸ್ಟರ್ ಆಫ್ ಫಿಲಾಸಫಿ ಹಾಗೂ ಒರ್ವ ಮಹಿಳೆ, ಐವರು ಪುರುಷ ಅಭ್ಯರ್ಥಿ ಸೇರಿದಂತೆ ಆರು ಜನರಿಗೆ ಡಾಕ್ಟರ್ ಆಫ್ ಫಿಲಾಸಫಿ ಪ್ರದಾನ ಮಾಡಲಾಗುತ್ತದೆ.
ಸ್ನಾತಕ ಪದವಿಗಳಾದ ಬಿ ಎ., ಬಿ. ಕಾಂ., ಬಿಬಿಎಂ, ಬಿ ಎಸ್ಸಿ, ಬಿ. ಇಡಿ, ಬಿಪಿಇಡಿ,ಬಿಸಿಎ, ಬಿ.ಎಸ್. ಡಬ್ಲ್ಯೂ, ಬಿಬಿಎ ಪದವಿಗಳಲ್ಲಿ 2020-21ನೇ ಸಾಲಿನಲ್ಲಿ 5854 ಮಹಿಳಾ ಹಾಗೂ 3,870 ಪುರುಷ ವಿದ್ಯಾರ್ಥಿಗಳು ಸೇರಿ 9,724 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಸ್ನಾತಕೋತ್ತರ ಪದವಿಗಳಾದ ಎಂ. ಎ, ಎಂ.ಎಸ್ಸಿ, ಎಂ. ಕಾಂ., ಎಂ.ಬಿ.ಎ., ಎಂ. ಎಸ್. ಡಬ್ಲ್ಯೂ, ಎಂ. ಇಡಿ, ಎಂಪಿಇಡಿ, ಪಿ. ಜಿ. ಡಿಪ್ಲೊಮೋ, ಸೇರಿದಂತೆ ವಿವಿಧ ಕೋರ್ಸ್ಗಳ 2020-21ನೇ ಸಾಲಿನಲ್ಲಿ 1025 ಮಹಿಳಾ ವಿದ್ಯಾರ್ಥಿಗಳು ಹಾಗೂ 589 ಪುರುಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1612 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
2020-21ನೇ ಸಾಲಿನಲ್ಲಿ ಒಟ್ಟು 79 ಸ್ವರ್ಣ ಪದಕಗಳು ಇದ್ದು, ಸ್ನಾತಕ ಪದವಿಯಲ್ಲಿ ಆರು ಪುರುಷ, ಏಳು ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 13 ವಿದ್ಯಾರ್ಥಿಗಳು 21 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ನಾತಕೋತ್ತರ ಪದವಿಯಲ್ಲಿ ಆರು ಪುರುಷ ಹಾಗೂ 25 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 31 ವಿದ್ಯಾರ್ಥಿಗಳು 58 ಸ್ವರ್ಣ ಪದಕ ಪಡೆಯಲಿದ್ದಾರೆ. ಒಟ್ಟಾರೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 32 ಮಹಿಳಾ ವಿದ್ಯಾರ್ಥಿಗಳು ಹಾಗೂ 12 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 44 ವಿದ್ಯಾರ್ಥಿಗಳು 79 ಚಿನ್ನದ ಪದಕ ಹಂಚಿಕೊಂಡಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಅಕ್ಟೋಬರ್ 2022ರಲ್ಲಿ ನಡೆದ ಪರೀಕ್ಷೆಯಲ್ಲಿ ಸ್ನಾತಕೋತ್ತರ ಆಡಳಿತ ನಿರ್ವಹಣಾ ಶಾಸ್ತ್ರ ವಿಭಾಗದ ಮೇಘಾ ಎಸ್. ಎನ್. ಎಂಬ ವಿದ್ಯಾರ್ಥಿನಿಯು ಅತಿ ಹೆಚ್ಚು ಅಂಕ ಪಡೆದು 5 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. 2020-21ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಪದವಿಯಲ್ಲಿ ಶೇಕಡಾ 74.40 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 96.41 ಫಲಿತಾಂಶ ಬಂದಿದೆ ಎಂದು ತಿಳಿಸಿದರು.