
ಬೆಂಗಳೂರು: ಕಾಂಗ್ರೆಸ್ನಲ್ಲಿ ಭಾವಿ ಸಿಎಂ ಫೈಟ್ ಶುರುವಾದ ಬೆನ್ನಲ್ಲೇ ಇದೀಗ ಪಕ್ಷಕ್ಕೆ ಭಾರೀ ಸರ್ಜರಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿದ್ಧರಾಗಿದ್ದಾರೆ. ರಾಹುಲ್ ಗಾಂಧಿ ಸೂಚನೆ ಹಿನ್ನೆಲೆಯಲ್ಲಿ ಡಿಕೆಶಿವಕುಮಾರ್ ಇಂಥದೊಂದು ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದರ ಮೊದಲ ಹಂತವಾಗಿ ಪಕ್ಷದ ಕಾರ್ಯಕಾರಿ ಸಮಿತಿಯಿಂದ ಸಿದ್ದರಾಮಯ್ಯ ಬಣದವರಿಗೆ ಕೊಕ್ ಕೊಡುವ ಕೆಲಸಕ್ಕೆ ಡಿಕೆಶಿ ತಯಾರಿ ನಡೆಸಿದ್ದಾರೆ ಎಂಬ ವರದಿಗಳಿವೆ.
ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷರುಗಳ ಜೊತೆ ಡಿಕೆಶಿ ನಡೆಸಿದ ಸಭೆಯಲ್ಲಿ ಕಾರ್ಯಕಾರಿ ಸಮಿತಿಯಲ್ಲಿನ ಬದಲಾವಣೆ ಬಗ್ಗೆಯೇ ಮುಖ್ಯವಾಗಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಸಮಿತಿಗೆ ಹೊಸ ಅರ್ಹರನ್ನು ನೇಮಿಸುವ ಸಂಬಂಧ ಪಟ್ಟಿಯೊಂದನ್ನು ಸಿದ್ಧಪಡಿಸಲು ಡಿಕೆಶಿ ಆಗಲೇ ಕಾರ್ಯೋನ್ಮುಖರಾಗಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಬಣದವರನ್ನು ದೂರವಿಟ್ಟು, ಸಿದ್ದರಾಮಯ್ಯನವರ ಬಲ ಕುಗ್ಗಿಸುವ ಡಿಕೆಶಿ ಪ್ರಯತ್ನಕ್ಕೆ ಪಕ್ಷದೊಳಗೆ ಯಾವ ಬಗೆಯ ಪ್ರತಿ ತಂತ್ರಗಳು ಹುಟ್ಟಿಕೊಳ್ಳಬಹುದು ಎಂಬುದೂ ಕೂಡ ಕುತೂಹಲಕರ ಸಂಗತಿಯೇ ಆಗಿದೆ.