ಬಿಗಿ ಭದ್ರತೆಯಲ್ಲಿ ಈ ವರ್ಷದ ಅಮರನಾಥ್ ಯಾತ್ರೆ

ಶ್ರೀನಗರ: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಪ್ರಸಿದ್ಧ ಅಮರನಾಥ ವಾರ್ಷಿಕ ಯಾತ್ರೆ ಈ ವರ್ಷ ಮತ್ತೆ ಪುನರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಯಾತ್ರೆಯ ಸಮಯದಲ್ಲಿ ಸಂಪೂರ್ಣ ಬಿಗಿ ಭದ್ರತೆ ಒದಗಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತ ಮಂಡಳಿ ನಿರ್ಧರಿಸಿದೆ.
ಒಟ್ಟು 43 ದಿನಗಳ ಅಮರನಾಥ ಯಾತ್ರೆ ಜೂನ್ 30ರಂದು ಆರಂಭವಾಗಲಿದ್ದು ಸಂಪ್ರದಾಯದಂತೆ ರಕ್ಷ ಬಂಧನದ ದಿನವಾದ ಆಗಸ್ಟ್ 11ರಂದು ಮುಕ್ತಾಯವಾಗಲಿದೆ. ಏಪ್ರಿಲ್ 11ರಿಂದ ವಾರ್ಷಿಕ ಯಾತ್ರೆಯ ನೋಂದಣಿಯು ಆರಂಭವಾಗಲಿದೆ.
ಈ ವರ್ಷ ಕೋವಿಡ್ ಇಳಿಕೆಯಾಗಿರುವುದರಿಂದ ದಾಖಲೆ ಪ್ರಮಾಣದ ಯಾತ್ರಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಯಾತ್ರಾರ್ಥಿಗಳ ಶಿಬಿರಗಳು ಹೆಚ್ಚು ಮಾಡಲಾಗುತ್ತಿದೆ. ಈ ವರ್ಷದ ಯಾತ್ರೆ ಶಾಂತಿ ಹಾಗೂ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವುದಾಗಿ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಗ್ಬಾಲ್ ಸಿಂಗ್ ಹೇಳಿದ್ದಾರೆ.
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮಾರ್ಗ ಹಾಗೂ ಗಂದರ್ ಬಲ್ ಜಿಲ್ಲೆಯ ಬಲ್ತಾಳ್ ಸಮೀಪದ ಮಾರ್ಗಗಳಲ್ಲಿ 43 ದಿನಗಳ ಯಾತ್ರೆಗಾಗಿ 40 ಸಾವಿರ ಕೇಂದ್ರ ಅರೆಸೇನಾಪಡೆ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಸುಧಾರಿತ ಸ್ಫೋಟಕಗಳನ್ನು ಬಳಸಿ ನಡೆಸಲಾಗುವ ವಿದ್ವಂಸಕ ಕೃತ್ಯಗಳನ್ನು ತಡೆಯಲು ಸಿಆರ್ ಪಿಎಫ್ ರಚಿಸಲಾಗಿರುವ ಸುಧಾರಿತ ಸ್ಫೋಟಕ ನಿಗ್ರಹ ತಂಡಗಳನ್ನು ನಿಯೋಜಿಸಲಾಗುವುದು ಎಂದು ಡಿಜಿಪಿ ತಿಳಿಸಿದ್ದಾರೆ.