ತಿರುಪತಿಗೆ ಭಕ್ತರಿಗೆ ಕರ್ನಾಟಕ ಸರ್ಕಾರದಿಂದ ಗುಡ್ನ್ಯೂಸ್

ಬೆಂಗಳೂರು : ತಿಮ್ಮಪ್ಪನ ಭಕ್ತರಿಗೆ ಕರ್ನಾಟಕ ಸರ್ಕಾರದಿಂದ ಸಿಹಿಸುದ್ದಿ ನೀಡಿದೆ, ಇನ್ಮುಂದೆ ಕೆಎಸ್ಆರ್ಟಿಸಿ ಬಸ್ ಮೂಲಕವೇ ಆಂಧ್ರ ಪ್ರದೇಶದಲ್ಲಿರುವ ತಿರುಪತಿ ದರ್ಶನ ಪಡೆಯಲು ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ವಿಐಪಿ ಮಾದರಿಯಾದ ಸಾರಿಗೆ, ಊಟ, ವಸತಿ ಸೇರಿದಂತೆ 2,500 ರೂ.ಗಳಲ್ಲಿ ಹೋಗಿ ಬರಬಹುದು.
ಈ ಹಿಂದೆ ಪ್ರವಾಸೋದ್ಯಮ ಇಲಾಖೆ ತಿರುಪತಿ ದರ್ಶನ ಸೌಲಭ್ಯವನ್ನು ಆರಂಭಿಸಿತ್ತು. ಆದರೆ ದಿನಕ್ಕೆ 200 ಮಂದಿಗೆಮಾತ್ರ ಇದು ಸೀಮಿತವಾಗಿತ್ತು. ಈಗ ಅದನ್ನು ದಿನಕ್ಕೆ 500 ಮಂದಿಗೆ ಏರಿಕೆ ಮಾಡಲಾಗಿದೆ.
ರಾಜ್ಯದ ಯಾವುದೇ ಜಿಲ್ಲೆಯಿಂದ ನೀವು ಪ್ರವಾಸ ಬುಕ್ ಮಾಡಿದರೂ ಬೆಂಗಳೂರಿಗೆ ಬರಬೇಕು. ದರ್ಶನದ ಹಿಂದಿನ ರಾತ್ರಿ ಬೆಂಗಳೂರಿನಿಂದ ಬಸ್ ಹೊರಡಲಿದೆ. ಮಾರ್ಗದ ನಡುವೆ ಉತ್ತಮ ಗುಣಮಟ್ಟದ ಊಟವಿದೆ. ಮಧ್ಯರಾತ್ರಿ ವೇಳೆಗೆ ಬಸ್ ತಿರುಪತಿ ತಲುಪಲಿದೆ. ತಿರುಪತಿಯಲ್ಲಿ ವಾಸ್ತವ್ಯಕ್ಕೆ ಹೋಟೆಲ್ ಇರುತ್ತದೆ.
ಮರುದಿನ ಬೆಳಗ್ಗೆ ಸುಮಾರು ಒಂದು ಗಂಟೆ ದರ್ಶನಕ್ಕೆ ಕಾಯಬೇಕು. ಬಳಿಕ ವಿಐಪಿ ದರ್ಶನ ಸೌಲಭ್ಯವಿದೆ. ಬಳಿಕ ಉಪಹಾರ ಮತ್ತು ಮಧ್ಯಾಹ್ನದ ಊಟ ಮುಗಿಸಿ ರಾತ್ರಿ ಬೆಂಗಳೂರಿಗೆ ವಾಪಸ್ ಬರಬಹುದು
ತಮಿಳುನಾಡು, ಕೇರಳ ಮತ್ತು ಇತರ ರಾಜ್ಯಗಳ ಭಕ್ತರಿಗೆ ಟಿಟಿಡಿ ವತಿಯಿಂದಲೇ ನಿತ್ಯ ದರ್ಶನಕ್ಕೆ ವ್ಯವಸ್ಥೆ ಇದೆ. ಆದರೆ ಕರ್ನಾಟಕದ 200 ಭಕ್ತರಿಗೆ ಮಾತ್ರ ಅವಕಾಶವಿತ್ತು. ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾದಾಗ ರಾಜ್ಯದ ಹೆಚ್ಚಿನ ಭಕ್ತರಿಗೆ ಅವಕಾಶ ನೀಡುವ ಕುರಿತು ಚರ್ಚಿಸಿದ್ದರು.
ಹೆಚ್ಚಿನ ಭಕ್ತರಿಗೆ ಅವಕಾಶ ನೀಡುವ ಕುರಿತು ಸುಬ್ಬಾರೆಡ್ಡಿ ಭರವಸೆ ನೀಡಿದ್ದರು. ಆದ್ದರಿಂದ ಈಗ ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಈ ವಿಶೇಷ ಪ್ಯಾಕೇಜ್ ಜಾರಿಗೆ ತರುತ್ತಿದೆ. ಸದ್ಯ 500 ಭಕ್ತರಿಗೆ ಇರುವ ದರ್ಶನದ ವ್ಯವಸ್ಥೆಯನ್ನು 1000ಕ್ಕೆ ಏರಿಕೆ ಮಾಡುವ ಪ್ರಸ್ತಾವನೆ ಸಹ ಇಲಾಖೆಯ ಮುಂದಿದೆ.