ಗುಜರಾತ್ ಚುನಾವಣೆಯ ಸಮೀಕ್ಷೆ ಸುಳ್ಳಾಗಲಿದೆ ಎಂದ ಕೇಜ್ರಿವಾಲ್

ಹೊಸದಿಲ್ಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಕುರಿತು ನೀಡಿರುವ ಚುನಾವಣೋತ್ತರ ಸಮೀಕ್ಷೆಗಳು ತಪ್ಪು ಎಂದು ಸಾಬೀತಾಗುತ್ತವೆ ಹಾಗೂ ಪಕ್ಷವು ವಾಸ್ತವವಾಗಿ 100 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಸೋಮವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು ದಿಲ್ಲಿಯ ಮಹಾನಗರಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಏರುತ್ತದೆ. ಆದರೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ನಿರ್ವಹಣೆ ತೋರುತ್ತದೆ.
‘ಫಲಿತಾಂಶಗಳು ಸಕಾರಾತ್ಮಕವಾಗಿವೆ . ಹೊಸ ಪಕ್ಷಕ್ಕೆ ಶೇಕಡಾ 15 ರಿಂದ 20 ರಷ್ಟು ಮತಗಳನ್ನು ಪಡೆಯುವುದು, ಅದು ಕೂಡ ಬಿಜೆಪಿ ಭದ್ರಕೋಟೆಯಲ್ಲಿ ದೊಡ್ಡ ಸಾಧನೆಯಾಗಿದೆ. ನಾಳೆಯ (ಎಣಿಕೆಯ ದಿನ) ತನಕ ಕಾಯಿರಿ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಮುನ್ಸಿಪಲ್ ಕಾರ್ಪೊರೇಷನ್ಗಳ ಮರು ಏಕೀಕರಣದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ದಿಲ್ಲಿಯ ಮಹಾನಗರ ಪಾಲಿಕೆಯಲ್ಲಿ ಎಎಪಿ ದೊಡ್ಡ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯು ಅಂದಾಜಿಸಿವೆ.
“ನಾನು ದಿಲ್ಲಿಯ ಜನರನ್ನು ಅಭಿನಂದಿಸುತ್ತೇನೆ. ದಿಲ್ಲಿಯ ಜನರು ಮತ್ತೊಮ್ಮೆ ಎಎಪಿ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಮತದಾನೋತ್ತರ ಸಮೀಕ್ಷೆಗಳು ತೋರಿಸಿವೆ. ಇದು ಫಲಿತಾಂಶವಾಗಲಿದೆ ಎಂದು ನಾನು ಭಾವಿಸುತ್ತೇನೆ…ನಾವು ನಾಳೆಯವರೆಗೆ ಕಾಯುತ್ತೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.