ಹಿಂದೂ ಮುಸ್ಲಿಂ ಗಲಭೆ: ಇಂಟರ್ನೆಟ್ ವ್ಯವಸ್ಥೆ ಸ್ಥಗಿತ

ಜೈಪುರ: ರಾಜಸ್ಥಾನದ ಜೋಧಪುರದಲ್ಲಿ ಸೋಮವಾರ ಸಂಜೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಈದ್ ಹಬ್ಬಕ್ಕೂ ಮುನ್ನ ಈ ಸಂಘರ್ಷ ನಡೆದಿದ್ದು, ಜಲೋರಿ ಗೇಟ್ ಪ್ರದೇಶದಲ್ಲಿ ಬಾವುಟ ಹಾರಿಸುವ ವಿಚಾರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಗುಂಪುಗಳ ನಡುವೆ ವಿವಾದ ಉಂಟಾಗಿದೆ.
ಜೋಧಪುರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಈದ್ ಹಬ್ಬದ ನಮಾಜ್ ನಡೆಸಲಾಗಿದೆ. ಜೋಧಪುರದಲ್ಲಿ ಮೂರು ದಿನಗಳ ಪರಶುರಾಮ ಜಯಂತಿ ಕೂಡ ನಡೆಯುತ್ತಿದೆ. ಗುಂಪುಗೂಡಿ ಜಗಳ ನಡೆಸುತ್ತಿದ್ದ ಜನರನ್ನು ಚೆದುರಿಸಲು ಪೊಲೀಸ್ ಪಡೆಗಳು ಬಲ ಪ್ರಯೋಗ ಮಾಡಿದವು. ಈ ವೇಳೆ ಗುಂಪುಗಳು ಪ್ರದೇಶದಲ್ಲಿ ನಿಯೋಜಿತರಾಗಿದ್ದ ಸ್ಥಳೀಯ ಪೊಲೀಸರ ಮೇಲೆ ಕೂಡ ದಾಳಿ ನಡೆಸಿವೆ. ಈ ಸಂಘರ್ಷದಿಂದ ಜೋಧಪುರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.
ಬಲ್ಮುಕಂಡ್ ಬಿಸ್ಸಾ ವೃತ್ತದಲ್ಲಿ ಹಿಂದೂ ಗುಂಪುಗಳು ಅಳವಡಿಸಿದ್ದ ಬಾವುಟಗಳನ್ನು ಕಿತ್ತುಹಾಕಲು ಕೆಲವು ವ್ಯಕ್ತಿಗಳು ಪ್ರಯತ್ನಿಸಿದ್ದರು. ಈ ವೇಳೆ ವಾಗ್ವಾದ ಶುರುವಾಗಿದೆ ಎಂದು ವರದಿಯಾಗಿದೆ.ಮೇ 3ರಂದು ಮಧ್ಯಾಹ್ನ 1 ಗಂಟೆಯಿಂದ ಎಲ್ಲ ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಲಾಗಿದೆ ಎಂದು ಜೋಧಪುರ ವಿಭಾಗೀಯ ಆಯುಕ್ತ ಹಿಮಾಂಶು ಗುಪ್ತಾ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.