ನಟ ಜಗ್ಗೇಶ್ ಪುತ್ರನ ಕಾರು ಮರಕ್ಕೆ ಡಿಕ್ಕಿ; ಅಪಾಯದಿಂದ ಪಾರಾದ ಗುರುರಾಜ್

ಬೆಂಗಳೂರು: ನಟ ಜಗ್ಗೇಶ್ ಪುತ್ರ ಗುರುರಾಜ್ ಕಾರು ಅಪಘಾತಕ್ಕೀಡಾಗಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಗುರುವಾರ ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಚಿಕ್ಕಬಳ್ಳಾಪುರದ ಅಗಲಗುರ್ಕಿ ಎಂಬ ಸ್ಥಳದಲ್ಲಿ ಈ ಘಟನೆ ಸಂಭವಿಸಿದ್ದು, ಗುರುರಾಜ್ ಅವರ ಬಿಎಂಡಬ್ಲೂ ಕಾರ್ ಪೂರ್ತಿಯಾಗಿ ನುಜ್ಜುಗುಜ್ಜಾಗಿದೆ.
ಬಿಳಿಬಣ್ಣದ ಕಾರ್ ನಲ್ಲಿ ತೆರಳುತ್ತಿದ್ದ ಜಗ್ಗೇಶ್ ಪುತ್ರನ ಕಾರಿನ ಟೈರ್ ಬ್ಲಾಸ್ಟ್ ಆಗಿದೆ ಎನ್ನಲಾಗುತ್ತಿದ್ದು, ಎದುರಿಗೆ ಬಂದ ಬೈಕ್ ಒಂದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಅದು ರಸ್ತೆ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಸದ್ಯ ಘಟನೆ ನಡೆದ ಸ್ಥಳದಲ್ಲಿ ಕಾರು ಮಾತ್ರ ಇದ್ದು, ಗುರುರಾಜ್ ಆಟೋ ಮೂಲಕ ಆಸ್ಪತ್ರೆ ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಈ ಬಗ್ಗೆ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ,ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ bnglr to ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆಬಿದ್ದಿದೆ!ರಾಯರದಯೇ ಹಾಗು ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವು ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ, ರಾಷ್ಟ್ರ ಪ್ರಶಸ್ತಿ ವಿಜೇತ, ನಟ ಸಂಚಾರಿ ವಿಜಯ್ ಬೈಕ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಹೆಲ್ಮೆಟ್ ಧರಿಸದ ಕಾರಣ, ತಲೆಗೆ ಪೆಟ್ಟು ಬಿದ್ದು, ಮಿದುಳು ನಿಷ್ಕ್ರಿಯಗೊಂಡು, ಅಸುನೀಗಿದ್ದರು. ಸಂಚಾರಿ ವಿಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ನಟ ಜಗ್ಗೇಶ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು.