
ಪೂರ್ಣ ವಿ-ರಾಮ
ಕೆಜಿಎಫ್ ಸಿನೆಮಾ ಬರೆದ ಇತಿಹಾಸ ಇವತ್ತಿಗೂ ಇತಿಹಾಸವೇ. ಕನ್ನಡ್ ಸಿನೆಮಾ ಎಂದು ಮೂತಿ ಮುರಿಯುತ್ತಿದ್ದ ಅದೇ ಹಿಂದಿವಾಲಾಗಳಿಗೆ ಎದೆ ಉಬ್ಬಿಸಿ ಇದು ಕಣ್ರಪ್ಪಾ ಕನ್ನಡ ಸಿನೆಮಾ ಅಂದ್ರೆ ಅಂತ ತೋರಿಸಿಕೊಟ್ಟ ರಾಷ್ಟ್ರೀಯ ಸಿನೆಮಾ ಕೆಜಿಎಫ್. ಅದರ ಮೊದಲ ಅಲೆ ಎಷ್ಟು ತೀವೃತೆಯಿಂದ ಕೂಡಿತ್ತೆಂದರೆ ಸೌತ್ ಮತ್ತು ನಾರ್ತ್ ಇಂಡಿಯಾದಲ್ಲಿ ಕೆಜಿಎಫ್ ಕ್ವಿಂಟಲ್ ಗಟ್ಟಲೇ ಸೌಂಡ್ ಮಾಡಿತು. ಹೆಸರು ಮಾಡಿತು. ದುಡ್ಡು ಮಾಡಿತು. ಹವಾ ಸೃಷ್ಟಿ ಮಾಡಿತು…!
-ಬಾಹುಬಲಿ ಸಿನೆಮಾ ಮಾದರಿಯಲ್ಲೇ ಕೆಜಿಎಫ್ ಕೂಡ ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಲು ಇನ್ನೊಂದು ಕಾರಣವಿದೆ. ಅದು ಚಾಪ್ಟರ್ ಒನ್ ಅಷ್ಟಕ್ಕೇ ಸೀಮಿತವಾಗಿದ್ದರೆ ಜನ ನೋಡಿ ಸುಮ್ಮನಾಗಿಬಿಡುತ್ತಿದ್ದರು. ಯಾವಾಗ ಕೊನೆಯ ಕ್ಷಣದಲ್ಲಿ ರಮೀಕಾ ಸೇನ್ ಕ್ಯಾರೆಕ್ಟರ್ ಕಡೆಯಿಂದ ರಾಕಿಭಾಯ್ ಗೆ ಗಲ್ಲಾಗಬೇಕು ಎಂದು ಪ್ರಶಾಂತ್ ನೀಲ್ ಹುಳಬಿಟ್ಟರೋ, ಪ್ರಶಾಂತವಾಗಿ ಮುಗಿಯಬೇಕಿದ್ದ ಸಿನೆಮಾ ಬುಗಿಲೆದ್ದ ಬೆಂಕಿಯಾಗಿಬಿಟ್ಟಿತು! ಕೆಜಿಎಫ್ 2 ಯಾವಾಗ ಎಂಬ ಬಾಹುಬಲಿ ಗಾತ್ರದ ಪ್ರಶ್ನೆ ಹಾಗೇ ಉಳಿದುಬಿಟ್ಟಿತು! ಅದೇ ಟೈಮಿಗೆ ಕೊರೋನಾ ಅಲೆಗಳ ಅಬ್ಬರ ಹೆಚ್ಚಾಗಿ, ಜನರಲ್ಲಿ ನಿರೀಕ್ಷೆಯ ಮಟ್ಟ ಡಬಲ್ ಆಯಿತು…!
ಅಂದುಕೊಂಡಂತೇ ಆಗಿದ್ದರೆ ಜುಲೈ ಹದಿನಾರಕ್ಕೇ ಬರಬೇಕಿತ್ತು!
ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡಿರೋ ಪ್ರಕಾರ ಕೆಜಿಎಫ್ 2 ಚಿತ್ರ ಜುಲೈ ಹದಿನಾರಕ್ಕೆ ಹೊರಬರಬೇಕಿತ್ತು. ಕೋವಿಡ್ ಎರಡನೇ ಅಲೆಗೆ ಇಡೀ ಇಂಡಿಯಾ ಲಾಕ್ ಆಯಿತು. ಅದೇ ಕಾರಣಕ್ಕೆ ಚೂರು ಪಾರು ಶೂಟಿಂಗ್ ಹಾಗೇ ಉಳಿಯಿತು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಲ್ಲಿಗಲ್ಲಿಗೇ ಸ್ಟಾಪ್ ಆಯಿತು. ಅವೆಲ್ಲವೂ ಆಗಿ ಇದೀಗ ಲಾಕ್ ಡೌನ್ ಮುಗಿದಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸಿನೆಮಾಗೆ ಬಾಕಿ ಉಳಿದಿರುವ ಕೆಲಸಗಳನ್ನು ಜಾಕ್ ಹಾಕಿ ಎಬ್ಬಿಸುತ್ತಿದ್ದಾರೆ. ಒಂದು ಮೂಲದ ಮಾಹಿತಿಯ ಪ್ರಕಾರ ಗಣೇಶನ ಹಬ್ಬಕ್ಕೆ ಕೆಜಿಎಫ್ ಚಿತ್ರ ಬಿಡುಗಡೆ ಆಗಲಿದೆ ಎಂಬ ಸುದ್ದಿಯೂ ಇದೆ. ಗಾಂಧಿನಗರ ಮಂದಿಯಂತೂ ಕೆಜಿಎಫ್ 2 ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಪಂಡಿತರ ಲೆಕ್ಕಾಚಾರದ ಪ್ರಕಾರ ಈ ಸಿನೆಮಾ ಮಿನಿಮಮ್ ಇನ್ನೂರೈವತ್ತು ಕೋಟಿ ಬಾಚಲಿದೆ. ಈಗಾಗಲೇ ಐವತ್ತು ಕೋಟಿ ಬಿಜಿನೆಸ್ ಡಿಜಿಟಲ್ ವೇದಿಕೆಯಿಂದ ಬಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅದೇನೇ ಇದ್ದರೂ ಕೆಜಿಎಫ್ 2 ಚಿತ್ರ ಹೊರಬಂದರೆ ಜಾತ್ರೆ ಆಗೋದಂತೂ ಗ್ಯಾರಂಟಿ. ಅದು ಮಾರಿ ಜಾತ್ರೆಯಾ? ಅಣ್ಣಮ್ಮನ ಜಾತ್ರೆಯಾ ಕಾದು ನೋಡಬೇಕಿದೆ!