
ಬೆಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗದ್ದಲಕ್ಕೆ ಸದ್ಯ ತೆರೆ ಬಿದ್ದಿದೆ. ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ರಕ್ಷಾ ರಾಮಯ್ಯ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಪಕ್ಕಾ ಆಗಿದೆ.
ಇದ್ದಕ್ಕಿದ್ದಂತೆ ರಕ್ಷಾ ರಾಮಯ್ಯ ಅವರನ್ನು ಬದಲಿಸುವುದಕ್ಕೆ ಮುಂದಾಗಿದ್ದು ಏಕೆ ಎಂದು ಏಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೆಣುಗೋಪಾಲ್ ಪ್ರಶ್ನಿಸಿರುವುದು ಡಿಕೆಶಿ ಬಣಕ್ಕೆ ಪೆಟ್ಟು ಕೊಟ್ಟಂತಾಗಿದೆ.
ರಕ್ಷಾ ರಾಮಯ್ಯ ಅವರನ್ನು ಬದಲಿಸಿ ನಳಪಾಡ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಸಿದ್ದರಾಮಯ್ಯ ಸಿಟ್ಟಾಗಿದ್ದರು. ಕಡೆಗೆ ಇದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಪ್ರತಿಷ್ಠೆಯ ಫೈಟ್ ಆಗಿ ಬದಲಾಗಿತ್ತು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಡುವಿನ ಪ್ರತಿಷ್ಠೆಯ ಫೈಟ್ ಆಗಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗದ್ದಲ
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ರಕ್ಷಾ ರಾಮಯ್ಯ್ ಅವರನ್ನು ಬದಲಿಸುವ ಪ್ರಶ್ನೆಯಿಲ್ಲ ಎಂಬುದನ್ನು ಇದೀಗ ಸ್ಪಷ್ಟಪಡಿಸಲಾಗಿದ್ದು, ಇಬ್ಬರ ನಡುವಿನ ಗಲಾಟೆಯಿಂದ ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂಬುದನ್ನು ಹೈಕಮಾಂಡ್ ಗಂಭೀರವಾಗಿ ಪೆಇಗಣಿಸಿದೆ. ರಾಹುಲ್ ಗಾಂಧಿಯವರಿಗೂ ಇದರಿಂದ ಬೇಸರವಾಗಿದೆ ಎಂಬುದನ್ನು ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ಇಬ್ಬರು ಯುವನಾಯಕರ ಬದಲಿಗೆ ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆಯೂ ಹೈಕಮಾಂಡ್ ಆಲೋಚಿಸಿದೆ. ಇಬ್ಬರಲ್ಲಿ ಯಾರಿಗೆ ಕೊಟ್ಟರೂ ಅಸಮಾಧಾನ ಉಳಿಯುತ್ತದೆಂಬ ಹಿನ್ನೆಲೆಯಲ್ಲಿ ಹೈಕಮಾಂಡ್ ಇಂಥದೊಂದು ಇಂಗಿತ ವ್ಯಕ್ತಪಡಿಸಿದೆ.
ಸದ್ಯ ರಕ್ಷಾ ರಾಮಯ್ಯ ಮುಂದುವರಿಕೆಯೊಂದಿಗೆ, ಸಿದ್ದರಾಮಯ್ಯ ಬಣದ ಕೈಮೇಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಳಪಾಡ್ ಅವರನ್ನು ಯುವ ಕಾಂಗ್ರೆಸ್ ಕುರ್ಚಿಯಲ್ಲಿ ಕೂರಿಸಬೇಕೆಂದಿದ್ದ ಡಿ ಕೆ ಶಿವಕುಮಾರ್ ಬಣಕ್ಕೆ ಸುಮ್ಮನಿರುವ ಅನಿವಾರ್ಯತೆ ಎದುರಾಗಿದೆ.