
ಬೆಳಗಾವಿ: ಸಿಡಿ ಪ್ರಕರಣದಲ್ಲಿ ಸಿಲುಕಿ ರಾಜಿನಾಮೆ ನೀಡಿ 4 ತಿಂಗಳಾದರೂ ತಮಗೆ ಕ್ಲೀನ್ ಚಿಟ್ ಸಿಗದಿರುವ ಹಿನ್ನೆಲೆಯಲ್ಲಿ ತೀವ್ರ ಸಿಡಿಮಿಡಿಗೊಂಡಿರುವ ಶಾಸಕ ರಮೇಶ ಜಾರಕಿಹೊಳಿ, ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವ ಮಾತನಾಡುತ್ತಿದ್ದಾರೆ. ಇನ್ನೊಂದೆಡೆ, ತಮ್ಮನ್ನು ತಕ್ಷಣಕ್ಕೆ ಮಂತ್ರಿ ಮಂಡಳಕ್ಕೆ ಸೇರಿಸಿಕೊಳ್ಳಲು ಅಸಾಧ್ಯವೆಂದಾದರೆ ಮಗನನ್ನಾದರೂ ಮಂತ್ರಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.
ಬಿಜೆಪಿಯಲ್ಲೇ ಕೆಲವರ ಹುನ್ನಾರದಿಂದಾಗಿ ತಮಗೆ ಸಿಡಿ ಪ್ರಕರಣದಿಂದ ಮುಕ್ತಿ ಸಿಗುತ್ತಿಲ್ಲ ಎಂದು ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಜೊತೆಗೆ ತಾವು ಮರಳಿ ಸಚಿವರಾಗುವ ಮುನ್ನವೇ ಜಲಸಂಪನ್ಮೂಲ ಖಾತೆಯಲ್ಲಿರುವ ಹಣವನ್ನೆಲ್ಲ ಖರ್ಚು ಮಾಡಲು ಕೆಲವರು ಸಂಚು ರೂಪಿಸಿದ್ದಾರೆ ಎನ್ನುವುದು ಅವರ ಅಸಮಾಧಾನ.
ತಮಗೆ ತಕ್ಷಣಕ್ಕೆ ಕ್ಲೀನ್ ಚಿಟ್ ಸಿಗುವುದಿಲ್ಲ ಎನ್ನುವ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಅವರು ಮಗನನ್ನು ಮಂತ್ರಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಗನನ್ನು ಮಂತ್ರಿ ಮಾಡುವ ಭರವಸೆ ನೀಡಿದಲ್ಲಿ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಿ, ಗೋಕಾಕ ಕ್ಷೇತ್ರದಿಂದಲೇ ಮಗನನ್ನು ಗೆಲ್ಲಿಸಿ ಮಂತ್ರಿ ಮಾಡುವ ಅಭಿಪ್ರಾಯ ಅವರದು
ಆದರೆ ಈ ಬಗ್ಗೆ ಮುಖ್ಯಮಂತ್ರಿಗಳಾಗಲಿ, ಹೈಕಮಾಂಡ್ ಆಗಲಿ ಇನ್ನೂ ಒಪ್ಪಿಲ್ಲ. ಹಾಗಂತ ತಕ್ಷಣಕ್ಕೆ ತಿರಸ್ಕರಿಸಿಯೂ ಇಲ್ಲ. ತಮಗೆ ಕ್ಲೀನ್ ಚಿಟ್ ಕೊಡಿಸುವುದಕ್ಕೆ ಮತ್ತು ತಮ್ಮ ಪ್ರಸ್ತಾವನೆ ಕುರಿತು ತೀರ್ಮಾನ ತೆಗೆದುಕೊಳ್ಳುವುದಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವುದೇ ರಮೇಶ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು 2 -3 ದಿನದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಬೇಕು. ಅದಿಲ್ಲವಾದರೆ ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ಮಾತನಾಡುವುದು. ಅದ್ಯಾವುದರಿಂದಲೂ ಪ್ರಯೋಜನವಾಗದಿದ್ದಲ್ಲಿ ಕಠಿಣವಾದ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ರಮೇಶ ಜಾರಕಿಹೊಳಿ ನಿರ್ಧಾರ ಎನ್ನಲಾಗುತ್ತಿದೆ.