
ವರದಿ: ರಾಚಪ್ಪ ಬನ್ನಿದಿನ್ನಿ
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿರುವ ಕ್ಷೇತ್ರ ಬಾದಾಮಿ. ಸದ್ಯ ಒಂದೆಡೆ ಕಾಂಗ್ರೆಸ್ನಲ್ಲಿ ಭಾವಿ ಸಿಎಂ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ತೊರೆಯುತ್ತಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
2018ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ವೇಳೆ ಅಂದು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ, ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ಬರುತ್ತವೆ ಎನ್ನುವ ಲೆಕ್ಕಾಚಾರ ಉಲ್ಟಾ ಆಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರಾಜಕೀಯ ವಿರೋಧಿಗಳು ಒಂದಾಗಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ರಾಜಕೀಯ ತಂತ್ರ ಹೆಣೆದಿದ್ದರು. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನುಭವಿಸಿದರು.
ಸಿದ್ದರಾಮಯ್ಯ ಉತ್ತರ ಕರ್ನಾಟಕದ ಕ್ಷೇತ್ರ ಹಾಗೂ ಕುರುಬ ಸಮಾಜದ ಪ್ರಾಬಲ್ಯವಿರುವ ಕ್ಷೇತ್ರ ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ ಶಾಸಕರಾಗಿದ್ದ ಬಿ ಬಿ ಚಿಮ್ಮನಕಟ್ಟಿ ಸಿದ್ದರಾಮಯ್ಯರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಸಿದ್ದರಾಮಯ್ಯರನ್ನು ಬಾದಾಮಿಯಲ್ಲೂ ಸೋಲಿಸಬೇಕೆಂದು ಬಿಜೆಪಿ ಬಿ, ಶ್ರೀರಾಮುಲು ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು. ಹೀಗಾಗಿ ಬಾದಾಮಿ ಹೈವೋಲ್ಟೇಜ್ ಕ್ಷೇತ್ರವಾಗಿ ರಾಜ್ಯ,ದೇಶ ಗಮನಸೆಳೆದಿತ್ತು. ಕೊನೆಗೆ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಬಿ ಶ್ರೀರಾಮುಲು ವಿರುದ್ಧ ಕೇವಲ 1696ಮತಗಳ ಅಂತರದಿಂದ ಪ್ರಯಾಸದ ಗೆಲುವು ಕಂಡಿದ್ದರು. ಸಿದ್ದರಾಮಯ್ಯ 67599ಮತಗಳನ್ನು ಪಡೆದುಕೊಂಡಿದ್ದರೆ,ಬಿ ಶ್ರೀರಾಮುಲು 65903 ಮತ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಹನಮಂತ ಮಾವಿನಮರದ 24484ಮತಗಳನ್ನು ಪಡೆಯುವ ಮೂಲಕ ಸಿದ್ದರಾಮಯ್ಯ ಗೆಲುವಿಗೆ ಪರೋಕ್ಷವಾಗಿ ಕಾರಣರಾಗಿದ್ದರು.
2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸೋದೆಲ್ಲಿ?
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಗೆದ್ದು ಶಾಸಕರಾದ ಬಳಿಕ ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದಾಗಲೊಮ್ಮೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಾರೆ. ಇನ್ನು ಬಾದಾಮಿ ಕ್ಷೇತ್ರಕ್ಕೆ ಈವರೆಗೆ ಅಂದಾಜು 2 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದಾರೆ. ಬಾದಾಮಿ, ಕೆರೂರು, ಗುಳೇದಗುಡ್ಡ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಕೆರೂರು ಏತ ನೀರಾವರಿ ಯೋಜನೆ ಸೇರಿದಂತೆ ಕ್ಷೇತ್ರದಲ್ಲಿ ಶಾಶ್ವತ ಯೋಜನೆ ಜಾರಿ ಮಾಡುತ್ತಿರುವುದು ಕ್ಷೇತ್ರದ ಜನರಿಗೆ ಮೆಚ್ಚುಗೆ ಆಗಿದೆ. ಆದರೆ ಇಷ್ಟೆಲ್ಲಾ ಅನುದಾನ ತಂದು ಬಾದಾಮಿ ಕ್ಷೇತ್ರ ಅಭಿವೃದ್ಧಿ ಮಾಡುತ್ತಿದ್ದರೂ ಸಿದ್ದರಾಮಯ್ಯ ಅವರು ಈ ಬಾರಿ ಬಾದಾಮಿ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಯಾಕಂದರೆ ಬಾದಾಮಿ ಮತಕ್ಷೇತ್ರಕ್ಕೆ ಸಿದ್ದರಾಮಯ್ಯ ಪದೇ ಪದೇ ಬರುವುದು ಸಮಸ್ಯೆ ಆಗುತ್ತಿದೆ. ಇನ್ನು ನಿರಂತರವಾಗಿ ಕ್ಷೇತ್ರದ ಜನರೊಂದಿಗೆ ಸಂಪರ್ಕ ತಪ್ಪುತ್ತಿದೆ. ಹೀಗಾಗಿ ಬಿಜೆಪಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಪದೇ ಪದೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಸಿದ್ದರಾಮಯ್ಯ ಅವರು ಟೂರಿಸ್ಟ್ ಶಾಸಕ ಎಂದು ಜನರಲ್ಲಿ ಭಾವನೆ ಬಿತ್ತುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಒಗ್ಗಟ್ಟಿಲ್ಲ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಪ್ರತಿಸ್ಪರ್ಧಿಯಾಗಿ ಮತ್ತೆ ಬಿ ಶ್ರೀರಾಮುಲು ಅಖಾಡಕ್ಕೆ ಇಳಿಯುವ ಸಾಧ್ಯತೆಯಿದೆ. ಇದರಿಂದ ಸಿದ್ದರಾಮಯ್ಯ ಅವರಿಗೆ ಗೆಲುವು ಕಷ್ಟಸಾಧ್ಯ ಆಗಬಹುದು.
ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಭಿವೃದ್ಧಿಕಾರ್ಯ ಮಾಡುತ್ತಿದ್ದು, ಅವುಗಳು ಸಿದ್ದರಾಮಯ್ಯನವರ ಗೆಲುವಿಗೆ ಶ್ರೀರಕ್ಷೆ ಆಗಲಿವೆ. ಬಾದಾಮಿ ಕ್ಷೇತ್ರದಲ್ಲಿ ಸದ್ಯ ಸಿದ್ದರಾಮಯ್ಯ ಪರ ಒಲವಿದ್ದರೂ.ಕೆಲ ಸಂಗತಿಗಳಿಂದ ಬಾದಾಮಿ ಕ್ಷೇತ್ರ ತೊರೆಯುತ್ತಿದ್ದಾರೆ ಎನ್ನಲಾಗಿದೆ. ಮುಂದೆ ಸಿದ್ದರಾಮಯ್ಯ ಚಾಮರಾಜಪೇಟೆ,ಅಥವಾ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ ಸಿದ್ದರಾಮಯ್ಯರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿರುವ ಕ್ಷೇತ್ರ ಬಾದಾಮಿಯಿಂದಲೇ ಸ್ಪರ್ಧಿಸಿ, ಮತ್ತೆ ರಾಜ್ಯದ ಸಿಎಂ ಆಗಲಿ ಎನ್ನುವ ಬಯಕೆಯನ್ನು ಅವರ ಬೆಂಬಲಿಗರು ವ್ಯಕ್ತಪಡಿಸುತ್ತಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಗಲು ಚುನಾವಣೆ ಸಂದರ್ಭದವರೆಗೂ ಕಾಯಬೇಕು.