ಪಶು ಸಂಗೋಪನೆಲೈಫ್ ಸ್ಟೈಲ್

ಅಳಿವಿನ ಅಂಚಿನಲ್ಲಿ ಭಾರತದ ಅತ್ಯಂತ ಪ್ರಾಚೀನ ಗಿರ್ ತಳಿ ಹಸು!

ಬೆಂಗಳೂರಿನಿಂದ ಕೋವಿಡ್ ಸಮಯದಲ್ಲಿ ಊರಿಗಾಗಮಿಸಿದ ಸಾಫ್ಟ್ವೇರ್ ಉಧ್ಯಮದ ಯುವ ಮಿತ್ರರದ್ದೂ ಇದೇ ಗೊಂದಲ. ಜಾನುವಾರು ಸಾಕಬೇಕು, ಪಶುಪಾಲನೆ ಮಾಡಬೇಕು. ಯಾವ ತಳಿ ಆರಿಸಲಿ. ಗಿರ್ ಹೇಗೆ? ಅದೆಲ್ಲಿ ಸಿಗುತ್ತದೆ ಎಂಬ ಪ್ರಶ್ನೆಗಳು..!! ಗಿರ್ ಆಕಳು ಸಾಕಬೇಕೆಂದಿದ್ದೇನೆ. ಅದು 10-20 ಲೀಟರ್ ಹಾಲು ಕೊಡುತ್ತದಂತೆ. ಅದರ ತುಪ್ಪಕ್ಕೆ ಬಹಳ ಬೆಲೆಯಂತೆ. ಅದರ ಮೂತ್ರದಲ್ಲಿ ಬಂಗಾರ ಇರುತ್ತಂತೆ? ಅದರ ಮೂತ್ರದಲ್ಲಿ ಔಷಧಿಯ ಗುಣವೇ ತುಂಬಿದೆಯಂತೆ? ಹೌದೇ ? ಗಿರ್ ತಳಿ ಹಸು ಸಾಕುವವರ ಮನಸಿನಲ್ಲಿ ಇಂತಹ ಅಂತೆ-ಕಂತೆ ಪ್ರಶ್ನೆಗಳು ಮೂಡುವುದು ಸಹಜ.

ಇತ್ತೀಚೆಗಂತೂ ಗಿರ್ ಹಸುಗಳ ಸಾಕಣೆ ಬಹಳ ಜನಪ್ರಿಯವಾಗುತ್ತಿದೆ. ಕೆಲ ಗೋಪಾಲಕರು ಇದನ್ನು ಸಾಕಿ ಇದರ ಬೆಣ್ಣೆ ಮತ್ತು ಹಾಲನ್ನು ಅವರದೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಿ ಲಾಭ ಗಳಿಸಿರುವುದನ್ನು ಕಾಣುತ್ತೇವೆ. ಮಿಶ್ರತಳಿ ಹಸುಗಳನ್ನು ಬಿಟ್ಟರೆ ಹಾಲಿನ ಇಳಿವರಿಯಲ್ಲಿ ಭಾರತೀಯ ತಳಿಗಳಲ್ಲಿ ಗಿರ್ ಪ್ರಥಮ ಸ್ಥಾನದಲ್ಲಿದೆ. ನಂತರ ಸಾಹಿವಾಲ್, ಓಂಗೋಲ್ ತಳಿಗಳ ಸರದಿ.

ದೇಶಿ ತಳಿ ಗಿರ್ ಒಂದು ದುಬಾರಿ ಹಸು. ಆದರೆ ಇದು ಕರ್ನಾಟಕಕ್ಕೆ ‘ದೇಶಿ’ ತಳಿ ಆಗಲಾರದು. ಪ್ರತಿ ಭಾಗಕ್ಕೆ ಅದರದೇ ಆದ ತಳಿಗಳಿವೆ. ಮಲೆನಾಡು ಭಾಗಕ್ಕೆ ಮಲೆನಾಡು ಗಿಡ್ಡ ದೇಶಿ ತಳಿಯಾದರೆ, ಚಿಕ್ಕಮಗಳೂರು ಭಾಗಕ್ಕೆ ಅಮೃತಮಹಲ್ ದೇಶಿ ಆಗಬಲ್ಲದು. ಹಾಗೇ ಉತ್ತರ ಕರ್ನಾಟಕದ ಭಾಗದ ಧಾರವಾಡ ಇತ್ಯಾದಿ ಭಾಗಗಳಿಗೆ ಖಿಲಾರ್ ದೇಶಿ ಆದರೆ, ಬೀದರ್‌ಗೆ ದೇವಣಿ ದೇಶಿ ಆಗಬಲ್ಲದು. ಇದೊಂದು ಸಾಮಾನ್ಯ ಜ್ಞಾನ. ದೂರದ ಗುಜಾರಾತಿನಿಂದ ನಮ್ಮ ರಾಜ್ಯಕ್ಕೆ ತಂದ ತಳಿ ನಮಗೆ ‘ಭಾರತೀಯ ತಳಿ’ ಆಗಬಲ್ಲದೇ ಹೊರತು ದೇಶಿ ಆಗಲಿಕ್ಕಿಲ್ಲ. ಜೊತೆಗೆ, ಇಲ್ಲಿನ ವಾತಾವರಣಕ್ಕೆ ಆಹಾರಕ್ಕೆ ಒಗ್ಗಿಕೊಳ್ಳಲು ಇವುಗಳಿಗೆ ಕಷ್ಟವೇ.

ಜುನಾಗಡ್ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಗಿರ್ ಆಕಳುಗಳ ಮೂತ್ರದಲ್ಲಿ ಬಂಗಾರವಿದೆ ಎಂಬ ಎಡವಟ್ಟು ಹೇಳಿಕೆ ನೀಡಿದ್ದೇ ಈ ತಳಿಗೆ ಡಿಮ್ಯಾಂಡ್ ಹೆಚ್ಚಾಯ್ತು. ಆದ್ರೆ ಇದೆಲ್ಲಾ ಬೋಗಸ್ ಅಂತ ಗೊತ್ತಾದ ಮೇಲೆ ಗಿರ್ ತಂದವರು ಪೆಚ್ಚು ಮೋರೆ ಹಾಕಿದ್ದೂ ಆಯ್ತು.

ಭಾರತದ ಅತ್ಯಂತ ಪ್ರಾಚೀನ ತಳಿ ಗಿರ್

ಭಾರತದ ಗೋ ಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗಿರ್ ಹಸುವಿಗೆ ವಿಶಿಷ್ಟ ಸ್ಥಾನ. ಭಾರತೀಯ ಗೋ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ ಸೌರಾಷ್ಟ ಬಳಿಯ ಗೀರ್ ಅರಣ್ಯಪ್ರದೇಶ ಇವುಗಳ ಮೂಲಸ್ಥಾನ. ಗಿರ್ ಭಾರತದ ಅತ್ಯಂತ ಪ್ರಾಚೀನ ತಳಿ, ಅಂದರೆ ಬರೊಬ್ಬರಿ 1200 ವರ್ಷಗಳಷ್ಟು ಹಳೆಯದು! ದಿನಕ್ಕೆ 12-14 ಲೀಟರ್ ಹಾಲು ಕೊಡುವ ಸಾಮರ್ಥ್ಯ, ಅಪೂರ್ವ ರೋಗ ನಿರೋಧಕ ಶಕ್ತಿ, ಭಾರತೀಯ ರೈತ ಜೀವನಕ್ಕೆ ಪೂರಕವಾದ ಕಷ್ಟಸಹಿಷ್ಣುತೆ, ಅಚ್ಚರಿ ಹುಟ್ಟಿಸುವಂತ ಬುದ್ಧಿಶಕ್ತಿ ಈ ಹಸುಗಳಿಗಿದೆ.

ಕಾಡಿನಿಂದ ಬಂದ ತಳಿಯಾದರೂ ಇದರ ಸಾಮಾಜಿಕ ಸ್ವಭಾವ ಅಮೋಘ. ತನ್ನ ಒಡೆಯನ ಪ್ರೀತಿಗೆ, ಮೈನೇವರಿಕೆಗೆ, ಮುದ್ದುಗರೆಯುವಿಕೆಗೆ ಇದು ಪ್ರತಿಸ್ಪಂದಿಸುವ ವಿಧಾನ ಆನಂದ ತರುವಂತದ್ದು ಎನ್ನುತ್ತರೆ ಇದನ್ನು ಸಾಕುವ ಹೈನುಗಾರರು. ಗಿರ್ ಹಸುಗಳು 400-450 ಕೆ.ಜಿ ತೂಗಿದರೆ, ಹೋರಿಗಳ ತೂಕ 550-650 ಕೆ.ಜಿ. ಗಿರ್ ಅನ್ನು ಸುಲಭವಾಗಿ ಗುರುತಿಸುವಂತೆ ಮಾಡುವುದು ಇದರ ಅಗಲ ಉಬ್ಬಿದ ಹಣೆ, ಕೆಂಪು ಮಿಶ್ರಿತ ಕಂದು ಬಣ್ಣ, ಅಗಲ ಮುಖ, ಜೋತಾಡುವ ದೊಡ್ಡ ಕಿವಿಗಳು. ಈ ಜೋತಾಡುವ ಕಿವಿಗಳು ಕೆಳಗೆ ಒಂದನ್ನೊಂದು ತಾಕಿದರೆ ಅದನ್ನು ಪರಿಶುದ್ಧ ಗಿರ್ ತಳಿ ಎಂದು ಗುರುತಿಸುತ್ತಾರೆ.

ಗಿರ್ ಸಾಮಾನ್ಯವಾಗಿ 21 ದಿನಕ್ಕೊಮ್ಮೆ ಬೆದೆಗೆ ಬರುತ್ತದೆ. ಬಹಳ ಸುಲಭವಾಗಿ ತಜ್ಞರ ಅಗತ್ಯವೇ ಇಲ್ಲದೆ ಗುರುತಿಸಬಹುದಾದಷ್ಟು ಸ್ಪಷ್ಟವಾಗಿ ಬೆದೆ ಲಕ್ಷಣಗಳು ತೋರುತ್ತವೆ. ಆದರೆ ಗರ್ಭಧಾರಣೆ ಸ್ವಲ್ಪ ಕಷ್ಟ. ಮೊದಲನೆ ಬೆದೆ ಬರುವುದು 20-24 ತಿಂಗಳುಗಳಲ್ಲಿ. 36 ತಿಂಗಳಲ್ಲಿ ಮೊದಲ ಕರು. ಕರು ಹಾಕಿದ ನಂತರ ಸುಮಾರು 300-320 ದಿನ ಹಾಲು ಕೊಡುತ್ತದೆ. 12-15 ವರ್ಷಗಳ ಆಯಸ್ಸಿನಲ್ಲಿ 6-10 ಕರುಗಳನ್ನು ಈಯುತ್ತದೆ. ಕರು ಹೆಣ್ಣಾದರೆ ಉತ್ತಮ. ಗಂಡಾದರೂ ಸಹ ಸದ್ಯಕ್ಕೆ ಹೋರಿಯ ರೂಪದಲ್ಲಿ ಮಾರುಕಟ್ಟೆ ಇದೆ.

ಗಿರ್‌ನ ವಿದೇಶಿ ಆವೃತ್ತಿಯ ಹೆಸರು ಬ್ರಹ್ಮನ್. ಹೀಗೆ ಇದು ಮನ್ನಣೆ ಗಳಿಸಲು ಕಾರಣವಾದದ್ದು ಅದರ ರೋಗನಿರೋಧಕ ಶಕ್ತಿ ಮತ್ತು ಹಾಲು ಕೊಡುವ ಸಾಮರ್ಥ್ಯ. ಬ್ರೆಜಿಲ್ ದೇಶವೂ ಸಹ ಗಿರ್ ತಳಿ ಒಯ್ದು ಅಲ್ಲಿನ ತಳಿಗಳಿಗೆ ಸಂಕರಣ ಮಾಡಿಕೊಂಡಿದೆ. ಈಗ ಅವನ್ನೆಲ್ಲಾ ಮಾಂಸಕ್ಕಾಗಿ ಬಳಸುತ್ತಿರುವುದು ತೆರೆಯ ಹಿಂದಿನ ವಿಷಯ. ಅನೇಕ ದೇಶಗಳು ಈ ತಳಿಯನ್ನು ಕೊಂಡೊಯ್ದಿರುವುದು ಅವುಗಳ ಆರೋಗ್ಯಪೂರ್ಣ ಹಾಲಿಗಲ್ಲ, ಅದರಿಂದ ದೊರಕುವ ಪುಷ್ಖಳ ಮಾಂಸಕ್ಕಾಗಿ ಅನ್ನುತ್ತದೆ ವರದಿ!

ರಮೇಶ್, ಹಿರಿಯ ನಿರ್ಮಾಪಕ, BMG 24X7 ಲೈವ್ ಕನ್ನಡ

Spread the love

Related Articles

Leave a Reply

Your email address will not be published.

Back to top button