ರುಚಿಯಾದ ಈರುಳ್ಳಿ ಚಟ್ನಿ ಮಾಡಿ ನೋಡಿ!

- – ಪವಿತ್ರಾ
ಬಿಸಿ ಬಿಸಿ ದೋಸೆ, ಇಡ್ಲಿ ಮಾಡಿದಾಗ ರುಚಿಯಾದ ಚಟ್ನಿ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ! ಇಲ್ಲಿ ಬೇಗನೆ ತಯಾರಾಗುವ ಹಾಗೂ ರುಚಿಯಾದ ಈರುಳ್ಳಿ ಚಟ್ನಿ ಮಾಡುವ ವಿಧಾನ ಇದೆ. ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.
ಈರುಳ್ಳಿ-3, ಹಸಿಮೆಣಸು-2, ಒಣಮೆಣಸು-3ರಿಂದ 4, ಉದ್ದಿನಬೇಳೆ-1/4 ಕಪ್, ಸಾಸಿವೆ-1 ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಮೆಂತ್ಯಕಾಳು-1/4 ಟೀ ಸ್ಪೂನ್, ಹುಣಸೆಹಣ್ಣು-1 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-1 ಟೀ ಸ್ಪೂನ್. ಒಗ್ಗರಣೆಗೆ-ಸಾಸಿವೆ-1 ಟೀ ಸ್ಪೂನ್, ಕರಿಬೇವು-5, ಇಂಗು-ಚಿಟಿಕೆ, ಎಣ್ಣೆ-1 ಟೀ ಸ್ಪೂನ್.
ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ 1 ಟಿ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಉದ್ದಿನಬೇಳೆ. ಒಣಮೆಣಸು. ಜೀರಿಗೆ, ಸಾಸಿವೆ, ಮೆಂತ್ಯಕಾಳು ಹಾಕಿ ಬಣ್ಣ ಬದಲಾಗುವವರಗೆ ಹುರಿಯಿರಿ. ನಂತರ ಇದನ್ನು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್ ಗೆ ಈರುಳ್ಳಿಯನ್ನು ಹಾಕಿ ಬಣ್ಣ ಬದಲಾಗುವವರಗೆ ಹುರಿಯಿರಿ.
ಹಾಗೇ ಹುಣಸೆಹಣ್ಣನ್ನು ಹಾಕಿ ತುಸು ಫ್ರೈ ಮಾಡಿ.ಹುರಿದಿಟ್ಟುಕೊಂಡ ಉದ್ದಿನಬೇಳೆ, ಒಣಮೆಣಸಿನ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಹಾಗೂ ಹುಣಸೆಹಣ್ಣಿನ ಮಿಶ್ರಣ ಹಾಕಿ ಹಾಗೇ ಹಸಿಮೆಣಸು ಸೇರಿಸಿ ಸ್ವಲ್ಪ ನೀರು ಹಾಕಿ ಚಟ್ನಿ ಹದಕ್ಕೆ ರುಬ್ಬಿಕೊಂಡು ಒಂದು ಬೌಲ್ ಗೆ ತೆಗೆದುಕೊಳ್ಳಿ. ನಂತರ ಸಾಸಿವೆ. ಕರಿಬೇವಿನ ಒಗ್ಗರಣೆ ಕೊಟ್ಟರೆ ರುಚಿಯಾದ ಈರುಳ್ಳಿ ಚಟ್ನಿ ಸವಿಯಲು ಸಿದ್ಧ. ಇದನ್ನು ದೋಸೆ, ಇಡ್ಲಿ, ಉತ್ತಪ್ಪ ಜತೆ ಸವಿಯಲು ಚೆನ್ನಾಗಿರುತ್ತದೆ. ಜತೆಗೆ ಬಿಸಿ ಅನ್ನದ ಜತೆ ಕೂಡ ಸವಿಯಬಹುದು.