ತೂಕ ಇಳಿಸಲು ಕಡಿಮೆ ಕಾರ್ಬ್ ಆಹಾರ ಸೇವಿಸಿ

- – ಪವಿತ್ರಾ
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಅನೇಕ ಆಹಾರಕ್ರಮಗಳನ್ನು ರೂಪಿಸಲಾಗಿದೆ. ಇದರಲ್ಲಿ ಕಿಟೋ ಡಯೆಟ್, ಡ್ಯಾಶ್ ಡಯೆಟ್, ಜಿಎಂ ಡಯೆಟ್ ಮುಂತಾದವುಗಳಿವೆ. ಇದರ ಜೊತೆಗೆ ಕಡಿಮೆ ಕಾರ್ಬ್ ಆಹಾರ ಕೂಡ ತೂಕ ಇಳಿಸಲು ಸಹಕಾರಿಯಾಗಿದೆ ಎನ್ನಲಾಗಿದೆ. ಹಾಗಾಗಿ ತೂಕ ಇಳಿಸಲು ಕಡಿಮೆ ಕಾರ್ಬ್ ಆಹಾರದಲ್ಲಿ ಏನನ್ನು ಸೇವಿಸಬೇಕು, ಏನನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳಿ.
ದೇಹ ಆರೋಗ್ಯವಾಗಿರಲು ಅಗತ್ಯವಾದ ಪೋಷಕಾಂಶಗಳು ಬೇಕಾಗುತ್ತದೆ. ಈ ಪೋಷಕಾಂಶಗಳಲ್ಲಿ ಒಂದು ಕಾರ್ಬೋಹೈಡ್ರೇಟುಗಳು. ಇವುಗಳನ್ನು ಸೇವಿಸಿದಾಗ ದೇಹವು ಇವುಗಳನ್ನು ಪ್ರೋಟೀನ್ ಗಳಾಗಿ ಒಡೆಯುತ್ತದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಆದರೆ ದೇಹಕ್ಕೆ ಕಾರ್ಬ್ ಗಳು ಅಗತ್ಯವಿಲ್ಲದಿದ್ದಾಗ ಅದು ದೇಹದಲ್ಲಿ ಸಂಗ್ರಹವಾಗಿ ಕೊಬ್ಬಾಗಿ ಬದಲಾಗಿ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಕಡಿಮೆ ಕಾರ್ಬ್ ಆಹಾರಗಳನ್ನು ಸೇವಿಸಿ.
ಮಾಂಸ ಮತ್ತು ಚಿಕನ್ ಸೇವಿಸಿ. ಅವುಗಳಲ್ಲಿ ಪ್ರೋಟೀನ್ ಹೇರಳವಾಗಿ ಕಂಡುಬರುತ್ತದೆ. ಇವುಗಳ ಸೇವನೆಯು ಹಸಿವನ್ನು ಕಡಿಮೆ ಮಾಡುತ್ತದೆ. ಮೀನು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಸೇವಿಸಿ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಗಾಗಿ ಮೊಟ್ಟೆಗಳನ್ನು ಸೇವಿಸಿ. ಹಸಿರು ಎಲೆಗಳು, ಎಲೆಕೋಸು, ಹೂಕೋಸು, ಅಣಬೆಗಳು ಈರುಳ್ಳಿ, ಟೊಮೆಟೊಗಳನ್ನು ಸೇವಿಸಿ. ಇವು ಕಡಿಮೆ ಕಾರ್ಬ್ ಅನ್ನು ಹೊಂದಿವೆ.
ಡೈರಿ ಉತ್ಪನ್ನಗಳನ್ನು ಕೂಡ ಸೇವಿಸಬಹುದು. ಹಾಗೇ ನಟ್ಸ್, ಡ್ರೈಫ್ರೂಟ್ಸ್ ಗಳು, ಮತ್ತು ತೆಂಗಿನೆಣ್ಣೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಅಲ್ಲದೇ ಸೇಬು, ಕಿತ್ತಳೆ, ಸ್ಟ್ರಾಬೆರಿ ಹಣ್ಣುಗಳನ್ನು ಸೇವಿಸಬಹುದು. ಆದರೆ ಬಾಳೆಹಣ್ಣುಗಳನ್ನು ಸೇವಿಸಬೇಡಿ. ಗೋಧಿ, ಬಾರ್ಲಿ, ಅಕ್ಕಿ, ಬ್ರೆಡ್, ಆಲೂಗಡ್ಡೆ, ಬೀನ್ಸ್, ಗೆಣಸು, ಸಕ್ಕರೆ ಸೇವಿಸಬೇಡಿ.