ಚಿತ್ರದುರ್ಗ – ದಾವಣಗೆರೆ ಕಾಂಗ್ರೆಸ್ ನಲ್ಲಿ ಗಂಡಸರು ಇರಲಿಲ್ವಾ: ಸಚಿವ ಭೈರತಿ ಬಸವರಾಜ್ ವಿವಾದಾತ್ಮಕ ಹೇಳಿಕೆ…!

ದಾವಣಗೆರೆ: ಚಿತ್ರದುರ್ಗ – ದಾವಣಗೆರೆ ಕಾಂಗ್ರೆಸ್ ನಲ್ಲಿ ಗಂಡಸರು ಇರಲಿಲ್ವಾ. ಬೆಂಗಳೂರಿನವರನ್ನು ಕರೆತಂದು ಇಲ್ಲಿ ಚುನಾವಣಾ ಕಣಕ್ಕಿಳಿಸಿದ್ದಾರೆ ಎಂದು ಹೇಳುವ ಮೂಲಕ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಹಣಕ್ಕಾಗಿ ಸ್ವಾಭಿಮಾನ ಮಾರಿಕೊಳ್ಳಬೇಡಿ. ಹಣ ಇದೆ ಎಂಬ ಕಾರಣಕ್ಕೆ ಬೆಂಗಳೂರಿನವರನ್ನು ಕರೆತಂದು ಕಾಂಗ್ರೆಸ್ ನವರು ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿದ್ದಾರೆ. ದಾವಣಗೆರೆ – ಚಿತ್ರದುರ್ಗದಲ್ಲಿ ಯಾರೂ ಕಾಂಗ್ರೆಸ್ ನವರು ಇರಲಿಲ್ವಾ. ಗಂಡಸರು ಯಾರೂ ಇಲ್ವಾ ಹಾಗಿದ್ರೆ ಎಂದು ಹೇಳಿದರು.

ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಗೆದ್ದಿರುವ ಎಂಪಿಯವರು ಹೊರಗಿನವರು. ದಾವಣಗೆರೆ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದರೂ ನೀವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೀರಾ. ಹಾಗಿದ್ದರೆ ಇಲ್ಲಿನವರಿಗೆ ಯಾಕೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಭೈರತಿ ಬಸವರಾಜ್ ಅವರು, ನಾನೇನೂ ದಾವಣಗೆರೆಯಲ್ಲಿ ಚುನಾವಣೆಯಲ್ಲಿ ಗೆಲ್ಲಬೇಕು ಎಂದುಕೊಂಡು ಬಂದಿಲ್ಲ. ಆದ್ರೆ, ಇರೋದೇ 35 ಸಚಿವ ಸ್ಥಾನ. ಎಲ್ಲರಿಗೂ ನೀಡಲು ಆಗದು. ಚಿತ್ರದುರ್ಗದಲ್ಲಿ ಬೇರೆ ಕಡೆಯಿಂದ ಬಂದು ಸ್ಪರ್ಧಿಸಿದರೂ ಜನರು ಬಿಜೆಪಿ ಅಭ್ಯರ್ಥಿಯನ್ನೇ ಲೋಕಸಭಾ ಸದಸ್ಯರನ್ನಾಗಿ ಗೆಲ್ಲಿಸಿದ್ದಾರೆ. ಹೇಳುತ್ತಾ ಹೋದರೆ ಸಾಕಷ್ಟಿದೆ. ಇಲ್ಲಿಗೆ ಬಿಟ್ಟುಬಿಡೋಣ ಎಂದರಲ್ಲದೇ, ಬೌನ್ಸ್ ಬೇರೆ ಕಡೆ ಆಗುವ ಪ್ರಶ್ನೆಯೇ ಇಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

ಇನ್ನು ಸಚಿವರು ಬದಲಾಗುತ್ತಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಯತ್ನಾಳ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನೇ ಕೇಳಬೇಕು. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯ ಮಗನಾಗಿ ನವೀನ್ ಪ್ರತಿನಿಧಿಸಿದ್ದಾರೆ. ಪಕ್ಷದ ನಿಷ್ಠಾವಂತ, ಸರಳ, ಸಜ್ಜನಿಕೆ, ಪ್ರಾಮಾಣಿಕ ವ್ಯಕ್ತಿ. ಕಳೆದ ಬಾರಿ ಸ್ವಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ನಾವು ಎರಡೂ ಜಿಲ್ಲೆಗಳಲ್ಲಿಯೂ ಪ್ರಚಾರ ಮಾಡುತ್ತಿದ್ದೇವೆ. ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ. ದುಡ್ಡು ಇದ್ದವರು ಸ್ಪರ್ಧೆ ಮಾಡಿದ್ದಾರೆ ಎಂಬ ಕಾರಣಕ್ಕೆ ನಮ್ಮ ಸೋಲಾಗದು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸದಸ್ಯರು ಹೆಚ್ಚಿದ್ದಾರೆ. ಹಾಗಾಗಿ, ಜಯ ನಮಗೆ ಸಿಗಲಿದೆ. ಅಂತರ ಎಷ್ಟು ಎಂದು ಹೇಳಲಾಗದು. ಮತದಾರರ ಒಲವು ಬಿಜೆಪಿ ಅಭ್ಯರ್ಥಿಯ ಪರ ಇದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀಡುತ್ತಿದ್ದದ್ದು ಕೇವಲ ಹತ್ತು ಲಕ್ಷ ರೂಪಾಯಿ ಅನುದಾನ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 30 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದು ಜಾಸ್ತಿಯಾಗಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಹೆಚ್ಚಿನ ಕೆಲಸಗಳಾಗುತ್ತವೆ. ಗ್ರಾಮ ಪಂಚಾಯಿತಿ ಸದಸ್ಯರ ಒಲವು ಬಿಜೆಪಿಯ ಕಡೆ ಇದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಿದ್ದು ಇದೇ ಬಿಜೆಪಿ ಸರ್ಕಾರ. ನನಗಾಗಲೀ, ಸಂಸದರಿಗಾಗಲೀ ಚೆಕ್ ಗೆ ಸಹಿ ಮಾಡುವ ಅಧಿಕಾರ ಇಲ್ಲ. ಆದ್ರೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಈ ಅಧಿಕಾರ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಕಡೆಗಳಲ್ಲಿಯೂ ಬಿಜೆಪಿ ಪರ ಒಲವಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳಕ್ಕೆ ಮನವಿ ಮಾಡಲಾಗುತ್ತಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಅವರೂ ಸಹ ಇದಕ್ಕೆ ಒಪ್ಪಿದ್ದಾರೆ. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗಾಗಿ ಇನ್ನು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಒಮಿಕ್ರಾನ್ ಕಾಲಿಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಕೊರೊನಾ ಅಲೆ ಬಂದಾಗ ಎಷ್ಟೋ ಮಂದಿ ಸಾವನ್ನಪ್ಪಿದರು. ಜನರು ಸಮಸ್ಯೆಗಳನ್ನು ಅನುಭವಿಸಿದರು. ಈ ಬಾರಿ ಆ ರೀತಿಯಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾಗದಂತೆ, ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಸಭೆ, ಸಮಾರಂಭಕ್ಕೆ ನಿಷೇಧ ಹೇರುವ ಕುರಿತಂತೆ ಇನ್ನು ತೀರ್ಮಾನವಾಗಿಲ್ಲ. ಈ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭೈರತಿ ಬಸವರಾಜ್ ಹೇಳಿದರು.

LEAVE A REPLY

Please enter your comment!
Please enter your name here