ಕೋವಿಡ್ ನಡುವೆ ವ್ಯಾಪಿಸಿದ ಮಕ್ಕಳ ಅಪೌಷ್ಠಿಕತೆಯ ಆತಂಕ

ಕಿರುಗುಂದ ರಫೀಕ್
ಭಾರತದಲ್ಲಿ ಕೋವಿಡ್ ಅಲೆಗಳ ನಡುವೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿನಗಳೆದಂತೆ ಹೆಚ್ಚಾಗತೊಡಗಿದೆ. ಕೋವಿಡ್-19 ಒಂದನೇ ಅಲೆ ಮುಗಿದು ಮತ್ತೆ ರಭಸದಿಂದ ಬಂದೆರಗಿದ 2ನೇ ಅಲೆಯ ಹೊಡೆತಕ್ಕೆ ಇಡೀ ದೇಶವೇ ತತ್ತರಿಸಿದೆ. ಇನ್ನು ಮುಂದಿನ ಅಲೆಗಳ ಭೀಕರತೆ ಹೇಗಿರಲಿದೆಯೋ ಎಂಬುದು ಗೊತ್ತಿಲ್ಲ.
ಮೊದಲೇ ಬಡತನ-ನಿರುದ್ಯೋಗ ತಾಂಡವವಾಡುತ್ತಿರುವ ಈ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ವಿಧಿಸಿರುವ ಲಾಕ್ಡೌನ್ ಪರಿಣಾಮ ಬಹುತೇಕ ಬಡಕುಟುಂಬದ ಮಕ್ಕಳಿಗೆ ಪೌಷ್ಠಿಕ ಆಹಾರವಿಲ್ಲದೆ ಆರೋಗ್ಯದ ಸಮಸ್ಯೆ ತಲೆದೋರಿದೆ. ಇದಲ್ಲದೆ ಶಾಲೆಗಳೂ ಲಾಕ್ ಆಗಿರುವುದರಿಂದ ಸಕಾಲಕ್ಕೆ ಕಲಿಕೆಯ ಆರಂಭವಾಗದೆ, ಅಥವಾ ಕಲಿಕೆಯಲ್ಲಿ ತೊಡಗಿದ್ದವರ ವ್ಯಾಸಂಗಕ್ಕೆ ಬ್ರೇಕ್ ಬಿದ್ದು ಬೌದ್ಧಿಕ ಮಟ್ಟದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದರೆ ದೇಶದ ಭವಿಷ್ಯವೂ ಅಧೋಗತಿಯತ್ತ ಸಾಗುವ ಆತಂಕ ಎದುರಾಗಿದೆ.
ದೇಶದ 9.2 ಲಕ್ಷ ಮಕ್ಕಳಿಗೆ ತೀವ್ರ ಅಪೌಷ್ಠಿಕತೆ:
ದೇಶದಲ್ಲಿ 9.27 ಲಕ್ಷ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಕಳೆದ ನವೆಂಬರ್ 1ರವರೆಗೆ ದೇಶದಲ್ಲಿ ಅಂದಾಜು 9,27,606 ರಷ್ಟು 6 ವರ್ಷದೊಳಗಿನ ಮಕ್ಕಳು ತೀವ್ರ ಅಪೌಷ್ಠಿಕಯಿಂದ ಬಳಲುತ್ತಿದ್ದಾರೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸುದ್ದಿಸಂಸ್ಥೆ ಪಿಟಿಐ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಬಂದ ಉತ್ತರದಿಂದ ತಿಳಿದುಬಂದಿದೆ.
ಮಕ್ಕಳಲ್ಲಿ ನ್ಯೂಟ್ರಿಷನಲ್ ಎಡಿಮಾ ಅಥವಾ ಊತವಿದ್ದರೆ ದೇಹದ ತೂಕ ಕಡಿಮೆಯಾಗಿರುವುದು, ಭುಜದ ಕೆಳಗೆ ಕೈ ಸುತ್ತಳತೆ 115 ಮಿ.ಮೀ. ಕಡಿಮೆಯಿದ್ದರೆ ಅಂತಹ ಸ್ಥಿತಿಯನ್ನು ದೀರ್ಘಕಾಲದ ತೀವ್ರ ಅಪೌಷ್ಠಿಕತೆ ಎಂದು ಗುರುತಿಸಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಲ್ಲಿದೆ.
ಯಾವ ರಾಜ್ಯದಲ್ಲಿ ಎಷ್ಟು ಮಕ್ಕಳಿಗೆ ಅಪೌಷ್ಠಿಕತೆ?
ರಾಜ್ಯವಾರು ನೋಡಿದರೆ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಉತ್ತರಪ್ರದೇಶ- 398359, ಬಿಹಾರ-279427, ಮಹಾರಾಷ್ಟ್ರ-70665, ಗುಜರಾತ್-45749, ಛತ್ತೀಸಗಡ-37249, ಒಡಿಶಾ-15595, ತಮಿಳುನಾಡು-12489 , ಜಾರ್ಖಂಡ್-12059, ಆಂಧ್ರಪ್ರದೇಶ-11201, ತೆಲಂಗಾಣ-9045, ಅಸ್ಸಾಂ-7218 ಹಾಗೂ ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 6899 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.
—————
“ಕೊರೋನಾ ಹೆಸರಲ್ಲಿ ವಿಧಿಸಿರುವ ಲಾಕ್ಡೌನ್ನಿಂದ ಸಧ್ಯದ ಪರಿಸ್ಥಿತಿಯಲಿ ಮಕ್ಕಳಲ್ಲಿ ಅಪೌಷ್ಠಿಕತೆಯೊಂದಿಗೆ ಮಕ್ಕಳ ಶಿಕ್ಷಣವೂ ಇಲ್ಲವಾಗಿದೆ. ಅಪೌಷ್ಠಿಕತೆ ಕಾರಣದಿಂದ ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ ಮೇಲೆ ಶಾಶ್ವತ ಹಾನಿಯಾಗಿದೆ. ಇದು ಆಡಳಿತ ವರ್ಗದ ಅಕ್ಷಮ್ಯ ಅಪರಾಧ”
-ಡಾ. ಬಿ.ಶ್ರೀನಿವಾಸ ಕಕ್ಕಿಲಾಯ. ಮಂಗಳೂರು