ವಿದೇಶಿ ಲಸಿಕೆಗಳ ಬಳಕೆಗೆ ಡಿಸಿಜಿಐ ನಿರ್ಧಾರ

ನವದೆಹಲಿ: ಫೈಜರ್ ಹಾಗೂ ಮಾಡರ್ನಾದಂಥ ಲಸಿಕೆಗಳ ಬಳಕೆಗೆ ದೇಶದಲ್ಲಿ ಅನುಮತಿ ನೀಡಿದ್ದು, ಭಾರತದಲ್ಲಿ ಈಚೆಗೆ ಕೊರೊನಾ ಲಸಿಕೆಗಳಿಗೆ ಕೊರತೆ ಎದುರಾದ ಬೆನ್ನಲ್ಲೇ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಈ ನಿರ್ಧಾರ ಪ್ರಕಟಿಸಿದೆ.
ಇದರೊಂದಿಗೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಮಹತ್ವದ ಹೆಜ್ಜೆಯಿಟ್ಟಂತಾಗಿದೆ. ಭಾರತದಲ್ಲಿ ವಿದೇಶಿ ಕೊರೊನಾ ಲಸಿಕೆಗಳ ನಿರ್ಬಂಧಿತ ಬಳಕೆಗೆ ಹಸಿರು ನಿಶಾನೆ ತೋರಿದೆ. ಯುಎಸ್ಎಫ್ಡಿಎ ಹಾಗೂ ಇನ್ನಿತರ ದೇಶಗಳಲ್ಲಿ ಅನುಮೋದನೆ ಪಡೆದಿರುವ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಿರುವುದಾಗಿ ತಿಳಿದುಬಂದಿದೆ.
ಯುಎಸ್ಎಫ್ಡಿಎ, ಇಎಂಎ, ಯುಕೆ ಎಂಎಚ್ಆರ್ಎ, ಪಿಎಂಡಿಎ ಜಪಾನ್ ಅನುಮೋದನೆ ನೀಡಿದ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆ ಪಟ್ಟಿಯಲ್ಲಿ ಉಲ್ಲೇಖಿಸಿದ ವಿದೇಶಿ ಕೊರೊನಾ ಲಸಿಕೆಗಳನ್ನು ತುರ್ತು ಹಾಗೂ ನಿರ್ಬಂಧಿತ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಲಕ್ಷಾಂತರ ಮಂದಿ ಈಗಾಗಲೇ ಈ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸದ್ಯಕ್ಕೆ ಭಾರತದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಫುಟ್ನಿಕ್ ವಿ ಲಸಿಕೆಗಳನ್ನು ನೀಡಲಾಗುತ್ತಿದೆ. 130 ದಿನಗಳಲ್ಲಿ 20 ಕೋಟಿಗೂ ಹೆಚ್ಚಿನ ಲಸಿಕೆಯನ್ನು ಭಾರತ ನೀಡಿದೆ.