ಕಾಂಗ್ರೆಸ್ ನಾಯಕ, ರಾಹುಲ್ ಆಪ್ತವಲಯದ ಜಿತಿನ್ ಪ್ರಸಾದ್ ಬಿಜೆಪಿ ಸೇರ್ಪಡೆ

ನವದೆಹಲಿ: ರಾಹುಲ್ ಗಾಂಧಿ ಅವರ ಪರಮಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ್ ಇಂದು ಬಿಜೆಪಿ ಸೇರಿದ್ದಾರೆ.
ಅಮಿತ್ ಶಾ, ಪಿಯೂಶ್ ಗೊಯೆಲ್ ಸಮ್ಮುಖದಲ್ಲಿ ಜಿತಿನ್ ಪ್ರಸಾದ್ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ.
47 ವರ್ಷ ವಯಸ್ಸಿನ ಜಿತಿನ್ ಪ್ರಸಾದ ಅವರು ಬಿಜೆಪಿ ಸೇರುವ ಬಗ್ಗೆ ಕಳೆದ ಎರಡು ವರ್ಷಗಳಿಂದ ಸುದ್ದಿ ಹಬ್ಬಿತ್ತು. ಉತ್ತರಪ್ರದೇಶದ ಕಾಂಗ್ರೆಸ್ ಪಕ್ಷದ್ ಬ್ರಾಹ್ಮಣ ಮುಖಂಡರ ಪೈಕಿ ಜಿತಿನ್ ಕೂಡಾ ಒಬ್ಬರು. ಕಾಂಗ್ರೆಸ್ ಹಿರಿಯ ಮುಖಂಡ ಜಿತೇಂದ್ರ ಪ್ರಸಾದ್ ಪುತ್ರ ಜಿತಿನ್.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಜಿತೇಂದ್ರ ರಾಜಕೀಯ ಸಲಹೆಗಾರರಾಗಿದ್ದರು. ಉತ್ತರಪ್ರದೇಶದ ಮುಂಬರುವ ಚುನಾವಣೆಯಲ್ಲಿ ಜಿತಿನ್ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇತ್ತು. ಆದರೆ,
ಜಿತಿನ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ಗೆ ಭಾರೀ ಹಿನ್ನಡೆ ಉಂಟಾಗಲಿದೆ.
ಜಿತಿನ್ 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಕ್ರಮವಾಗಿ ಶಹಝಾನ್ಪುರ ಮತ್ತು ಧೌರಾಹ್ರಾ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿದು ಗೆದ್ದಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಮೊದಲ ಮತ್ತು ಎರಡನೇ ಅವಧಿಯ ಸರ್ಕಾರದಲ್ಲಿ ಸಚಿವರಾಗಿದ್ದರು.
ಕಳೆದ ವರ್ಷದ ಮಾರ್ಚ್ನಲ್ಲಿ ಕಾಂಗ್ರೆಸ್ನ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾದ ಬಳಿಕ ಈಗ ಕಾಂಗ್ರೆಸ್ನ ಅದರಲ್ಲೂ ರಾಹುಲ್ ಆಪ್ತವಲಯದ ಮತ್ತೊಬ್ಬ ನಾಯಕ ಬಿಜೆಪಿಯತ್ತ ಹೊರಟಿರುವುದು ಕಾಂಗ್ರೆಸ್ ಭವಿಷ್ಯದ ಬಗ್ಗೆ ಆತಂಕ ಹುಟ್ಟಿಸುವ ಸಂಗತಿಯಾಗಿದೆ.