ರಾಜ್ಯ

ದೊರೆಸ್ವಾಮಿ ನಿಧನ: ಗಣ್ಯರ ಕಂಬನಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಮುಖ್ಯಮಂತ್ರಿ ಬಿಎ್ ಯಡ್ಯೂರಪ್ಪ ಟ್ವೀಟ್ ಮಾಡಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಎಚ್ ಎಸ್ ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ಸಚಿವ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿಗೆ ಎಚ್ ಎಸ್ ದೊರೆಸ್ವಾಮಿ ಹಿರಿಯಣ್ಣನಂತೆ ಇದ್ದರು. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಪ್ರಮುಖರು. ತಮ್ಮ ಇಳಿವಯಸ್ಸಿನಲ್ಲಿಯೂ ತಮ್ಮ ಇಡೀ ಜೀವನವನ್ನು ಸಮಾಜಸೇವೆಗೆ ಅವರು ಮುಡಿಪಾಗಿಟ್ಟಿದ್ದರು. ಅವರ ನಿಧನದಿಂದ ಕನ್ನಡ ನಾಡು ಬಡವಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.

ಸಚಿವ ಮುರುಗೇಶ್ ನಿರಾಣಿ, ಮಹಾತ್ಮಗಾಂಧಿ ಅವರ ಪ್ರೇರಣೆಯಿಂದ ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೊರೆಸ್ವಾಮಿ ಅವರ ನಿಧನ ಕರ್ನಾಟಕಕ್ಕೆ ಮಾತ್ರವಲ್ಲ, ದೇಶಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ಎಚ್ ಎಸ್ ದೊರೆಸ್ವಾಮಿ ಅವರ ನಿಧನದ ಸುದ್ದಿ ದುಃಖ ತಂದಿದೆ. ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸುದೀರ್ಘ ಸಾರ್ವಜನಿಕ ಜೀವನ ನಡೆಸಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸಚಿವ ಕೆ ಎಸ್ ಈಶ್ವರಪ್ಪ ಸಂತಾಪ ಸೂಚಿಸಿದ್ದು, ದಣಿವರಿಯದ ಸ್ವಾತಂತ್ರ್ಯ ಹೋರಾಟಗಾರ, ನಮ್ಮ ನಿಮ್ಮೆಲ್ಲರ ನೆಚ್ಚಿನ ಎಚ್ ಎಸ್ ದೊರೆಸ್ವಾಮಿಯವರು ಇಂದು ನಮ್ಮನ್ನೆಲ್ಲ ಅಗಲಿದ ಸುದ್ದಿ ತಿಳಿದು ತೀವ್ರ ದುಃಖವಾಯ್ತು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ, ಹಾಗೂ ಅಭಿಮಾನಿ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಹೇಳಿದ್ದಾರೆ.

ನಾಡಿನ ಹಿರಿಯ ಚೇತನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದೊರೆಸ್ವಾಮಿ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ.ಇಂತಹ ಅದಮ್ಯ ಚೇತನದ ನಿಧನ ಅಗಲಿಕೆಯನ್ನು ಭರಿಸುವ ಶಕ್ತಿ ಜಗನ್ಮಾತೆ ಮೃತರ ಕುಟುಂಬಕ್ಕೆ ನೀಡಲಿ.ಅವರ ಆತ್ಮಕ್ಕೆ ದೇವರು ಸದ್ಗತಿ ಶಾಂತಿ ನೀಡಲಿ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.

ನೇರ ನಡೆ, ನುಡಿಯ ದೊರೆಸ್ವಾಮಿ ಅವರು ಹುಟ್ಟು ಹೋರಾಟಗಾರರು. ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ದೊರೆಸ್ವಾಮಿ ಅವರು ಹೋರಾಟಗಾರರಷ್ಟೇ ಅಲ್ಲ, ಪತ್ರಕರ್ತರೂ ಆಗಿದ್ದರು. ಇಳಿ ವಯಸ್ಸಿನಲ್ಲೂ ಸಮಾಜ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ರೈತರು, ಶೋಷಿತ ವರ್ಗದವರ ಧ್ವನಿಯಾಗಿದ್ದವರು ದೊರೆಸ್ವಾಮಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೆನಪಿಸಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button