ಮಾಜಿ ಸಚಿವ, ಬಿಜೆಪಿ ಶಾಸಕ ಸಿ ಎಂ ಉದಾಸಿ ನಿಧನ

ಬೆಂಗಳೂರು : ಮಾಜಿ ಸಚಿವ ಹಾಗೂ ಹಾನಗಲ್ ಶಾಸಕ ಸಿ.ಎಂ.ಉದಾಸಿ ನಿಧನರಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವಯೋಸಹಜ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.
ಕಳೆದ 15 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕಿಡ್ನಿ ತೊಂದರೆ ಮತ್ತು ಹೃದಯ ಸಮಬಂಧಿ ಕಾಯಿಲೆಯಿತ್ತು.
ಮಧ್ಯಾಹ್ನ 2.54ಕ್ಕೆ ಉದಾಸಿ ವಿಧಿವಶವಾದರು ಎಂದು ವೈದ್ಯರು ತಿಳಿಸಿದ್ದಾರೆ. ನಾಳೆ ಹಾನಗಲ್ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಉದಾಸಿ ಅವರಿಗೆ ಪತ್ನಿ ನೀಲಮ್ಮ, ಪುತ್ರ, ಸಂಸದ ಶಿವಕುಮಾರ ಉದಾಸಿ, ಪುತ್ರಿ ಜಯಶ್ರೀ ಇದ್ದಾರೆ.
85 ವರ್ಷದ ಅವರು ಆರು ಬಾರಿ ಶಾಸಕರಾಗಿದ್ದರು. 1083ರಿಂದ ಹಾನಗಲ್ ಕ್ಷೇತ್ರದಿಂದ ಸತತ 9 ಬಾರಿ ಸ್ಪರ್ಧಿಸಿದ್ದರೆಂಬುದು ವಿಶೇಷ.
ಸಚಿವರಾಗಿ ಅವರು ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಸಣ್ಣ ನೀರಾವರಿ, ಜವಳಿ ಖಾತೆಗಳನ್ನು ನಿಭಾಯಿಸಿದ್ದರು. ರಾಮಕೃಷ್ಣ ಹೆಗಡೆ, ಜೆ ಎಚ್ ಪಟೇಲ್ ಮತ್ತು ಯಡಿಯೂರಪ್ಪ ಈ ಮೂವರು ಮುಖ್ಯಮಂತ್ರಿಗಳ ಸಂಪುಟದಲ್ಲಿ ಕೆಲಸ ಮಾಡಿದ್ದವರು ಉದಾಸಿ.
ಬಿಜೆಪಿ ಹಿರಿಯ ನಾಯಕನ ಅಗಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರು ಕಂಬನಿ ಮಿಡಿಸಿದ್ದಾರೆ.
ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿಯಾಗಿದ್ದ ಅವರು, ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು, ಲೋಕೋಪಯೋಗಿ ಸಚಿವರಾಗಿ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯದಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಭಗವಂತ ಅವರ ಕುಟುಂಬದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.