ರಾಜ್ಯ

ಭೂಮಿ ಪರಭಾರೆ ನಿರ್ಧಾರ ವಾಪಸ್ – ಜನತೆಗೆ ಸರ್ಕಾರ ವಿವರಣೆ ನೀಡಬೇಕು; ಎಚ್ ಕೆ ಪಾಟೀಲ್ ಆಗ್ರಹ

ಗದಗ: ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡಬಾರದು ಎಂದು ಬಿಜೆಪಿ ಸರ್ಕಾರ ನಿರ್ಣಯ ತೆಗೆದುಕೊಂಡಿದ್ದು, ಇದು ರೈತರು ಹಾಗೂ ಸಾರ್ವಜನಿಕ ಆಸ್ತಿ ಕಾಪಾಡಬೇಕೆನ್ನುವವರಿಗೆ ಸಂದ ಜಯ. ಆದರೆ, ಸರ್ಕಾರ ಮಾತ್ರ ಮೊದಲು ಭೂಮಿ ನೀಡಲು ಒಪ್ಪಿಗೆ ನೀಡಿದ್ದು ಹಾಗೂ ಸದ್ಯ ಈ ನಿರ್ಣಯದ ಕುರಿತು ಹಿಂದೆ ಸರಿದಿರುವ ಕುರಿತು ವಿವರಣೆಯನ್ನು ರಾಜ್ಯದ ಜನತೆಗೆ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಪಾಟೀಲ್ ಆಗ್ರಹಿಸಿದ್ದಾರೆ.

ಈ ಮೊದಲು ರಾಜ್ಯ ಬಿಜೆಪಿ ಸರ್ಕಾರವು ಜಿಂದಾಲ್ ಗೆ 3,665 ಎಕರೆ ಭೂಮಿಯನ್ನು ರಿಯಾಯತಿ ದರದಲ್ಲಿ ಪರಭಾರೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು, ನಿರ್ಣಯ ಕೈಗೊಂಡಿತ್ತು. ಆದರೆ, ಇಂದು ಮತ್ತೆ ಈ ನಿರ್ಣಯ ಹಿಂಪಡೆದಿದೆ. ಈ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತವಿದ್ದ ಸಂದರ್ಭದಲ್ಲಿ ಜಿಂದಾಲ್ ಕಂಪನಿಗೆ ಭೂಮಿ ನೀಡಲು ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿತ್ತು. ಆ ಸಂದರ್ಭದಲ್ಲಿ ನಾನು ಇದನ್ನು ವಿರೋಧ ಮಾಡಿದ್ದೆ. ಆಗ ಇದೇ ಬಿಜೆಪಿಯ ನಾಯಕರು, ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಿದ್ದರು. ನಾನು ಕೂಡ ಆ ನಿರ್ಣಯದ ವಿರುದ್ಧ ದ್ವನಿ ಎತ್ತಿದ್ದೆ. ಆಗ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವರು ಕೂಡ ವಿವರಣೆ ಪಡೆದಿದ್ದರು. ಆ ನಂತರ ನನ್ನ ಬಳಿ ಸಾಕಷ್ಟು ಸಚಿವರು, ಶಾಸಕರು ವಿವರಣೆ ಪಡೆದು ಅದರ ವಿರುದ್ಧ ಮಾತನಾಡಿದ್ದರು. ಆಗ ಅದನ್ನು ರದ್ದುಗೊಳಿಸಲಾಗಿತ್ತು.

ಅಂದು ಬಿಜೆಪಿಯ ನಾಯಕರು, ಇಂದಿನ ಸಿಎ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಗಲು – ರಾತ್ರಿ ಹೋರಾಟ ನಡೆಸಿದ್ದರು. ಚಳುವಳಿ, ಪ್ರತಿಭಟನೆ ನಡೆಸಿದ್ದರು. ನಿರ್ಣಯ ರದ್ದಾಗುತ್ತಿದ್ದಂತೆ ಜನರಿಂದ ಅಭಿನಂದನೆ ಪಡೆದಿದ್ದರು. ಆದರೆ, ಸದ್ಯ ಅವರೇ ಜಿಂದಾಲ್ ಕಂಪನಿಗೆ ಜಾಗ ನೀಡಲು ನಿರ್ಣಯ ತೆಗೆದುಕೊಂಡು, ನಂತರ ರದ್ದು ಮಾಡಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಸಂತೋಷವಾಗಿದೆ. ಇದು ಭ್ರಷ್ಟಾಚಾರ ವಿರೋಧ ಧ್ವನಿಗೆ ಸಿಕ್ಕ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಅಂದು ಜಿಂದಾಲ್ ಗೆ ಭೂಮಿ ನೀಡಲು ನಿರ್ಣಯ ತೆಗೆದುಕೊಂಡ ಬಗ್ಗೆ ಹಾಗೂ ಇಂದು ಅದನ್ನು ಮತ್ತೆ ರದ್ದು ಮಾಡಿರುವ ಕುರಿತು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹಾಗೂ ಸಿಎಂ ಅವರು ಜನರಿಗೆ ವಿವರಣೆ ನೀಡಬೇಕು. ಯಾವ ಕಾರಣಕ್ಕೆ ಅದನ್ನು ಕೊಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸದ್ಯ ಯಾವ ಕಾರಣಕ್ಕೆ ನಿರ್ಣಯ ಹಿಂಪಡೆಯಲಾಗಿದೆ ಎಂದು ಜನರಿಗೆ ಬಹಿರಂಗವಾಗಿ ತಿಳಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಜಿಂದಾಲ್ ಕಂಪನಿಯು ಸರ್ಕಾರ ಹಾಗೂ ಸರ್ಕಾರದ ಅಂಗ – ಸಂಸ್ಥೆಗಳಿಗೆ ರೂ. 2 ಸಾವಿರ ಕೋಟಿ ಬಾಕಿ ಹಣ ನೀಡಬೇಕು. ಇಷ್ಟಿದ್ದರೂ ಆ ಕಂಪನಿಗೆ ಸರ್ಕಾರ ಭೂಮಿ ಪರಭಾರೆ ಮಾಡಲು ಯಾವ ಕಾರಣಕ್ಕೆ ಮುಂದಾಗಿತ್ತು? ಇದನ್ನು ಜನರಿಗೆ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button