ಜನವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ; ಕೇಂದ್ರಕ್ಕೆ ಸಿದ್ದರಾಮಯ್ಯ ಒತ್ತಾಯ

ಕೇಂದ್ರ ಸರ್ಕಾರ ರೈತ ಚಳವಳಿಕಾರರ ಬೇಡಿಕೆಗಳನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸಿ ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಸರ್ಕಾರದ ಹಲವು ವೈಫಲ್ಯಗಳನ್ನು ಎತ್ತಿ ಹಿಡಿದಿರುವ ಅವರು ಏಳು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳು ಹೀಗಿವೆ:
- ಮೋದಿಯವರ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ತಾನು ಸರ್ವಾಧಿಕಾರಿಯಲ್ಲ ಎಂಬ ವಿವೇಕವಂತಿಕೆ ಇದ್ದರೆ ಕೂಡಲೇ ರೈತರೊಂದಿಗೆ ಶಾಂತಿಯುತವಾಗಿ ಚರ್ಚಿಸಿ ಹೋರಾಟವನ್ನು ಹಿಂಪಡೆಯುವಂತೆ ಮಾಡಬೇಕು. ರೈತರ, ಕಾರ್ಮಿಕ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು.
2. ಕೂಡಲೇ ಜನ ವಿರೋಧಿಯಾದ ಅದಾನಿ, ಅಂಬಾನಿ ಮತ್ತು ಕಾರ್ಪೊರೇಟ್ ಪರವಾದ ಕಾನೂನುಗಳನ್ನು ಹಿಂಪಡೆಯಬೇಕು.
3. ಪ್ರತಿಭಟನೆಯ ಸಂದರ್ಭದಲ್ಲಿ ಮರಣ ಹೊಂದಿದ ಎಲ್ಲ ರೈತರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು.
4. ರೈತರು ಬೆಳೆಯುವ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ನೀಡಬೇಕು ಮತ್ತು ಗ್ರಾಹಕರಿಗೂ ನ್ಯಾಯಯುತವಾದ ಬೆಲೆಗಳಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸಿಗುವಂತೆ ಮಾಡಬೇಕು.
5. ಅದಾನಿ ಮುಂತಾದವರು ಅಕ್ರಮವಾಗಿ ಸಂಗ್ರಹಿಸಿರುವ ಎಲ್ಲ ಉತ್ಪನ್ನಗಳನ್ನು ವಶಪಡಿಸಿಕೊಂಡು ಮಾರುಕಟ್ಟೆಗೆ ತಂದು ಹಣದುಬ್ಬರವನ್ನು ನಿಯಂತ್ರಿಸಬೇಕು. ನ್ಯಾಯಯುತ ಬೆಲೆಗಳಿಗೆ ಮಾರುವಂತೆ ಮಾಡಬೇಕು. ಕೂಡಲೇ ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಬೇಕು.
6. ರೈತರು ಬೆಳೆದ ಬೆಳೆಗಳಿಗೆ ಬೆಲೆ ಖಾತ್ರಿ ಕಾಯಿದೆಯನ್ನು, ಗ್ರಾಹಕರಿಗೆ ನ್ಯಾಯಯುತ ಬೆಲೆಗಳ ಖಾತ್ರಿಯ ಕಾಯಿದೆಯನ್ನು ಜಾರಿಗೊಳಿಸಬೇಕು. ಇದನ್ನು ನಿಭಾಯಿಸಲು ಸರ್ವಪಕ್ಷಗಳ, ತಜ್ಞರ, ರೈತ ಮುಖಂಡರ, ಗ್ರಾಹಕ ಪ್ರತಿನಿಧಿಗಳ ಶಾಶ್ವತ ಸಮಿತಿಯನ್ನು ರಚಿಸಬೇಕು.
7. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ ಡೌನ್ ಅವಧಿಯಲ್ಲಿ ಮತ್ತು ಆ ನಂತರ ಜಾರಿಗೆ ತಂದಿರುವ, ತಿದ್ದುಪಡಿ ಮಾಡಿರುವ ಎಲ್ಲ ಕಾಯ್ದೆಗಳನ್ನು ರದ್ದುಪಡಿಸಬೇಕು.