ಕೊವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಪಡೆದರೂ ಕೋವಿಡ್-19 ಡೆಲ್ಟಾ ಪ್ರಭೇದದ ಸೋಂಕು ತಡೆಯವುದು ಅಸಾಧ್ಯವೇ?

ಕೋವಿಡ್ ಸೋಂಕನ್ನು ತಡೆಗಟ್ಟಲು ಲಸಿಕೆಗಳನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಅದಕ್ಕಾಗಿ ಕೊರೋನಾದಿಂದ ರಕ್ಷಿಸಿಕೊಳ್ಳಲು, ಲಸಿಕೆಯ ಎರಡು ಪ್ರಮಾಣವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಆದರೆ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದರೂ ಕೋವಿಡ್-19ನ ‘ಡೆಲ್ಟಾ’ ಪ್ರಭೇದದ ಸೋಂಕನ್ನು ತಡೆಯಲು ಸಾಧ್ಯವಿಲ್ಲ ಎಂದು ದಿಲ್ಲಿ ಏಮ್ಸ್ (AIIMS) ಹಾಗೂ ರೋಗ ನಿಯಂತ್ರಣದ ರಾಷ್ಟ್ರೀಯ ಕೇಂದ್ರ (NCDC)ದ ಎರಡು ಪ್ರತ್ಯೇಕ ವರದಿಗಳಲ್ಲಿ ಹೇಳಲಾಗಿದೆ.
ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದ ವಾರ್ಡ್ ನಲ್ಲಿ 5ರಿಂದ 7 ದಿನಗಳ ಕಾಲ ತೀವ್ರ ಜ್ವರ ಕಾಣಿಸಿಕೊಂಡ ಕೋವಿಡ್ ರೋಗಲಕ್ಷಣ ಹೊಂದಿದ 63 ಮಂದಿ ರೋಗಿಗಳ ವಿಶ್ಲೇಷಣೆಯನ್ನು AIIMS – IGIB ಯ ಅಧ್ಯಯನದ ವರದಿಯ ಆಧಾರದಲ್ಲಿ ಈ ಮಾಹಿತಿ ನೀಡಲಾಗಿದೆ.
63 ಜನರಲ್ಲಿ 53 ಜನರಿಗೆ ಕನಿಷ್ಠ ಒಂದು ಡೋಸ್ ಕೊವ್ಯಾಕ್ಸಿನ್ ನೀಡಲಾಗಿತ್ತು. ಉಳಿದವರಿಗೆ, ಒಂದು ಡೋಸ್ ಕೋವಿಶೀಲ್ಡ್ ನೀಡಲಾಗಿತ್ತು. ಡೆಲ್ಟಾ ಪ್ರಭೇದ ಕೊರೋನ ಲಸಿಕೆಯ ಒಂದು ಡೋಸ್ ತೆಗೆದುಕೊಂಡ ಶೇ. 76.9 ಜನರಲ್ಲಿ ಹಾಗೂ ಎರಡೂ ಡೋಸ್ ತೆಗೆದುಕೊಂಡ ಶೇ. 60 ಜನರಲ್ಲಿ ಸೋಂಕು ಉಂಟು ಮಾಡಿರುವುದು ಪತ್ತೆಯಾಗಿದೆ. ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಶೇ. 70.3 ಜನರಲ್ಲಿ ಡೆಲ್ಟಾ ಸೋಂಕಿಗೆ ತುತ್ತಾಗಿದ್ದಾರೆ ಎಂಬುದನ್ನು NCDC – IGIB ಡೇಟಾ ತಿಳಿಸಿದೆ. ಈ ವರದಿಯನ್ನು ಉನ್ನತ ಸಂಸ್ಥೆಗಳು ಪರಾಮರ್ಶಿಸಿಲ್ಲ ಎನ್ನಲಾಗಿದೆ.
ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರಲ್ಲಿ ‘ಆಲ್ಫಾ’ ಪ್ರಬೇಧದ ಸೋಂಕು ತಗಲದೇ ಇರುವುದನ್ನು ಎರಡೂ ಅಧ್ಯಯನಗಳ ವರದಿಗಳು ಬಹಿರಂಗಪಡಿಸಿವೆ. ಡೆಲ್ಟಾ ಹಾಗೂ ಆಲ್ಫಾ ಪ್ರಬೇಧದ ವಿರುದ್ಧದ ಲಸಿಕೆಗಳ ರಕ್ಷಣೆಯ ಪ್ರಮಾಣ ಕಡಿಮೆಯಾಗಬಹುದು, ಪ್ರತಿ ಪ್ರಕರಣದಲ್ಲಿ ಸೋಂಕಿನ ತೀವ್ರತೆಯ ಮೇಲೆ ಲಸಿಕೆಗಳು ಯಾವುದೇ ಪರಿಣಾಮ ಉಂಟು ಮಾಡದಿರುವುದು ಕಂಡು ಬಂದಿದೆ ಎಂದು ಎರಡೂ ಅಧ್ಯಯನಗಳು ತಿಳಿಸಿವೆ. ಆದರೆ, ಡೆಲ್ಟಾ ವೈರಸ್ ಅನ್ನು ಕೂಡ ತಟಸ್ಥಗೊಳಿಸುವ ಸಾಮರ್ಥ್ಯವನ್ನು ಭಾರತ ಬಯೋಟೆಕ್ ನ ಕೊವ್ಯಾಕ್ಸಿನ್ ಹೊಂದಿದೆ ಎಂದು ಪುಣೆಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಐಸಿಎಂಆರ್-ಎನ್ಐವಿ)ಯ ಸಂಶೋಧಕರು ಪತ್ತೆ ಮಾಡಿದ್ದಾರೆ.
ಈವರೆಗೆ ಭಾರತದಲ್ಲಿ 22 ಕೋಟಿ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಆದರೆ ಈ ಬಗ್ಗೆ ಜನರಲ್ಲಿ ಇನ್ನೂ ಅನೇಕ ತಪ್ಪು ಕಲ್ಪನೆಗಳು ಉಂಟಾಗುತ್ತಿರುವ ನಡುವೆಯೇ ಈ ಸಂಶೋಧನಾ ವರದಿ ಹೊರಬಿದ್ದಿದೆ.