ಅಭಿಮತಚರ್ಚೆ

ಪಾಕಿಸ್ತಾನದ ರಾಜಕೀಯ ತ್ಸುನಾಮಿಗೆ ಕೊನೆಯೆಂದು?

ಪಾಕಿಸ್ತಾನದ ಆಂತರಿಕ ರಾಜಕೀಯ ಸಂಘರ್ಷ ಈಗ ಅಂತಿಮಘಟ್ಟಕ್ಕೆ ತಲುಪಿದೆ. ವಿರೋಧ ಪಕ್ಷಗಳು ಮಾರ್ಚ್​ 28ರಂದು ಅವಿಶ್ವಾಸ ಪ್ರಸ್ತಾವ ಮಂಡಿಸಿದಂದಿನಿಂದಲೂ ಕೊತಕೊತನೆ ಕುದಿಯುತ್ತಿದ್ದ ಪಾಕಿಸ್ತಾನದ ರಾಜಕೀಯ ಇಂದು ಕುದಿಯುವ ಬಿಂದುವನ್ನು ತಲುಪಿಯಾಗಿದೆ. ಇಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಪ್ರಸ್ತಾವದ ಮೇಲೆ ಚರ್ಚೆ ಹಾಗೂ ಮತದಾನ ನಡೆಯಬೇಕಿತ್ತು. ಅದು ಶುರುವಾಗುವ ಕೆಲವೇ ಸಮಯಕ್ಕೆ ಮುನ್ನ ಡೆಪ್ಯೂಟಿ ಸ್ಪೀಕರ್ ಮೊಹಮ್ಮದ್ ಖಾಸೀಮ್ ಖಾನ್ ಸೂರಿ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಪ್ರಸ್ತಾಪವನ್ನು ತಳ್ಳಿಹಾಕಿದರು. ಬಾಹ್ಯಶಕ್ತಿಗಳು ಪಾಕಿಸ್ತಾನದ ಸರ್ಕಾರವನ್ನು ಬೀಳಿಸಲು ಹೂಡಿದ ಸಂಚು ಬಯಲಾಗಿದ್ದುದರಿಂದ ಬಾಹ್ಯಶಕ್ತಿಗಳ ಕೈಯಲ್ಲಿ ಪಾಕಿಸ್ತಾನದ ಆಡಳಿತ ಹೋಗದಿರುವಂತೆ ಮಾಡಲು ಸರ್ಕಾರದ ಪರವಾಗಿ ಈ ನಿರ್ಣಯವನ್ನು ಕೈಗೊಳ್ಳುತ್ತಿರುವುದಾಗಿ ಅವರು ಹೇಳಿದರು. ಹಾಗೆಯೇ ಪಾಕಿಸ್ತಾನದ ಅಸೆಂಬ್ಲಿಯನ್ನು ವಿಸರ್ಜಿಸಲು ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಪ್ರಕಟಿಸಿದರು.

ಇಮ್ರಾನ್ ಖಾನ್ ಸಹ ಈ ಬಗ್ಗೆ ಮಾತಾಡುತ್ತ ಪಾಕಿಸ್ತಾನದ ಡೆಪ್ಯೂಟಿ ಸ್ಪೀಕರ್​ಗೆ ತಮ್ಮ ಧನ್ಯವಾದಗಳನ್ನು ಅರ್ಪಿಸುತ್ತ, ಪಾಕಿಸ್ತಾನವನ್ನು ಬಾಹ್ಯ ಶಕ್ತಿಗಳಿಗೆ ಮಾರಿಕೊಳ್ಳಲು ಹೊರಟ ಕೆಲವು ಸಂಚುಕೋರರಿಂದ ದೇಶವನ್ನು ಕಾಪಾಡಬೇಕಿದೆ. ಆದ್ದರಿಂದ ಅಸೆಂಬ್ಲಿಯನ್ನು ವಿಸರ್ಜಿಸಿ ಮತ್ತೊಮ್ಮೆ ಚುನಾವಣೆ ನಡೆಸಲು ಅಧ್ಯಕ್ಷರಿಗೆ ನಿರ್ಣಯ ಕಳುಹಿಸಲಾಗಿದೆ ಎಂದರು. ಇದೀಗ ಚೆಂಡು ಪಾಕ್ ಅಧ್ಯಕ್ಷರ ಅಂಗಳದಲ್ಲಿದ್ದು, ಅವರು ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲವನ್ನು ಮೂಡಿಸಿದೆ.

ಸ್ಪೀಕರ್​ರ ಈ ನಿರ್ಣಯವನ್ನು ಪಾಕಿಸ್ತಾನದ ವಿರೋಧ ಪಕ್ಷವಾದ PPP ಪಕ್ಷದ ಚೇರ್​ಮನ್ ಬಿಲಾವಿಲ್ ಭುಟ್ಟೋ ಜರ್ದಾರಿ ಖಂಡಿಸಿದರು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಅವಿಶ್ವಾಸ ಪ್ರಸ್ತಾಪದ ಮೇಲಿನ ಮತದಾನ ಇಂದೇ ನಡೆಯಬೇಕಾಗಿತ್ತು. ಆದರೆ ಸ್ಪೀಕರ್ ಅಸಂವಿಧಾನಿಕ ನಡೆಯಿಂದ ಅವಿಶ್ವಾಸ ಪ್ರಸ್ತಾಪವನ್ನೇ ತಳ್ಳಿಹಾಕಿದ್ದಾರೆ. ಇದು ಅತ್ಯಂತ ಖಂಡನೀಯ ಮತ್ತು ಅಸಾಂವಿಧಾನಿ ಕ್ರಮ. ನಾವು ಇದರ ವಿರುದ್ಧ ಸುಪ್ರೀ ಕೋರ್ಟಿನ ತೀರ್ಪಿಗೆ ಕಾಯುತ್ತೇವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯದ ಇಡೀ ಘಟನಾಕ್ರಮವನ್ನು ಅವಲೋಕಿಸಿದರೆ ಇದು ಯಾವುದೇ ತಿರುವನ್ನು ತೆಗೆದುಕೊಂಡರೂ ಅಲ್ಲಿ ರಾಜಕೀಯ ವಿಪ್ಲವಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿವೆ. ನಾವು ಪಾಕಿಸ್ತಾನದ ಇತಿಹಾಸವನ್ನು ಕೆದಕಿದರೆ ಅಲ್ಲಿ ಯಾವುದೇ ಸರ್ಕಾರವೂ ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿಲ್ಲ ಹಾಗೂ ಯಾವುದೇ ಬಿಕ್ಕಟ್ಟು ಸಂವಿಧಾನಬದ್ಧವಾಗಿ ಎಂದೂ ಬಗೆಹರಿದಿಲ್ಲ. ಒಂದೋ ಅದ್ಯಕ್ಷ ಸರ್ಕಾರವನ್ನು ಹೈಜಾಕ್ ಮಾಡಿರುತ್ತಾನೆ ಅಥವಾ ಸೇನೆ ಸರ್ಕಾರವನ್ನು ವಜಾಗೊಳಿಸಿ ಅಧಿಕಾರವನ್ನು ತನ್ನ ಕೈಯಲ್ಲಿ ತೆಗೆದುಕೊಂಡಿರುತ್ತದೆ. ಈ ಅಂಶಗಳ ಅಡಿಯಲ್ಲಿ ಪ್ರಸ್ತುತ ಇಮ್ರಾನ್ ಬಿಕ್ಕಟ್ಟನ್ನು ನೋಡುವುದಾದರೆ ಇಮ್ರಾನ್ ತಮ್ಮ ಈ ನಡೆಯಿಂದ ಅಸೆಂಬ್ಲಿ ವಿಸರ್ಜಿಸಿ ಚುನಾವಣೆಯವರೆಗೂ ಹೋದರೆ ಅದು ಅವರ ಗೆಲುವೆಂದೇ ಭಾವಿಸಬೇಕಾಗುತ್ತದೆ.

ಓಪಿ, ಹಿಉಸಂ, ಬಿಎಂಜಿ24×7

Spread the love

Related Articles

Leave a Reply

Your email address will not be published.

Back to top button