ಅಭಿಮತವಿದೇಶಸಂಪಾದಕೀಯಸ್ಪೆಷಲ್ ಸ್ಟೋರೀಸ್

ಉಕ್ರೇನ್ ರಷ್ಯಾ ಯುದ್ಧ; ಸೋತವರೇನಾದರು, ಗೆದ್ದವರೇನಾದರು?

ಉಕ್ರೇನ್ ಮತ್ತು ರಷ್ಯಾ ಯುದ್ಧ ಶುರುವಾಗಿ ಇಂದಿಗೆ ಸರಿಯಾಗಿ 47 ದಿನಗಳಾಗಿವೆ. ಉಕ್ರೇನ್ ಮೇಲೆ ಆಕ್ರಮಣ ಮಾಡುವುದಕ್ಕಿಂತ ಮುನ್ನ ರಷ್ಯಾ ಅಂದುಕೊಂಡಿದ್ದು ಈ ಯುದ್ಧವನ್ನು ಎರಡು ಮೂರು ದಿನಗಳಲ್ಲಿ ಕೈವ್ ವಶಪಡಿಸಿಕೊಳ್ಳುವ ಮೂಲಕ ಮುಗಿಸಿಬಿಡಬಹುದು ನಂತರ ತನ್ನಿಷ್ಟದ ಅಧ್ಯಕ್ಷನನ್ನು ಉಕ್ರೇನ್​ನಲ್ಲಿ ಕೂರಿಸಬಹುದು ಎಂದು. ಆದರೆ ರಷ್ಯಾ ಎಣಿಸಿದ್ದೇ ಒಂದು, ಅದು ಆದದ್ದೇ ಮತ್ತೊಂದು. ರಷ್ಯಾ ಕನಸಿನಲ್ಲಿಯೂ ಯೋಚಿಸದಂತಹ ಬೆಳವಣಿಗೆಗಳು ನಡೆದು, ನ್ಯಾಟೋ ರಾಷ್ಟ್ರಗಳು ಉಕ್ರೇನ್​ಗೆ ಅಪಾರ ಪ್ರಮಾಣದ ಮದ್ದುಗುಂಡುಗಳ ಸಹಾಯ ಮಾಡಿದ್ದರಿಂದ ಉಕ್ರೇನನ್ನು ಇದುವರೆಗೂ ಮಣಿಸಲು ರಷ್ಯಾದ ಕೈಯಿಂದ ಸಾಧ್ಯವಾಗಿಲ್ಲ.

ಉಕ್ರೇನ್ ರಾಜಧಾನಿ ಕೈವ್ ವಶಪಡಿಸಿಕೊಳ್ಳು ಮೊದಲ ಹದಿನೈದು ಇಪ್ಪತ್ತು ದಿನಗಳ ಕಾಲ ಹರಸಹಾಸಪಟ್ಟ ರಷ್ಯಾಗೆ ಅದು ಸಾಧ್ಯವಾಗಲೇ ಇಲ್ಲ. ಇದರಿಂದ ರಷ್ಯಾ ಕೈವ್ ಬಿಟ್ಟು ಉಕ್ರೇನ್​ನ ಇತರ ಹಲವು ನಗರಗಳಾದ ಮಾರಿಯೋಪೋಲ್, ಖಾರ್ಕೀವ್ ಮುಂತಾದ ನಗರಗಳ ಮೇಲೆ ಅವಿರತವಾಗಿ ಬಾಂಬ್ ದಾಳಿ ನಡೆಸಿತು. ಸಾವಿರಾರು ಮುಗ್ದ ನಾಗರಿಕರ ಮಾರಣ ಹೋಮ ಮಾಡಿತು. ಆದರೆ ಇದರಿಂದ ಎರಡೂ ಕಡೆಯವರ ಪ್ರಾಣಹಾನಿಯಾಯಿತೆ ಹೊರತು ಯಾವ ಸಾಧನೆಯೂ ಆಗಲಿಲ್ಲ. ರಷ್ಯಾ ದಾಳಿಯಿಂದಾಗಿ ಉಕ್ರೇನ್​ನ ಹಲವು ನಗರಗಳು ಸ್ಮಶಾನಗಳಂತಾಗಿವೆ.

ಸ್ಮಶಾನದಂತಾಗಿರುವ ಉಕ್ರೇನ್ ನಗರ

ಬಿಬಿಸಿ ನ್ಯೂಸ್ ವರದಿಯಂತೆ ರಷ್ಯನ್ ಸೈನಿಕರು ಉಕ್ರೇನ್​ನಲ್ಲಿ ನಾಗರಿಕರ ಮನೆಗಳ ಮೇಲೆ ದಾಳಿ ಮಾಡಿ ಗಂಡಂದಿರ ಕೊಲೆ ಮಾಡಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ. ಯುದ್ಧದ ಭೀಕರತೆಗೆ ಸಾಕ್ಷಿಯಾಗಿ ಅಲ್ಲಿನ ಜನರ ಜೀವನ ನರಕಸದೃಶ್ಯವಾಗಿದೆ. ರಷ್ಯಾ ಸಹ ತನ್ನ 12 ಸಾವಿರಕ್ಕಿಂತ ಅಧಿಕ ಸೈನಿಕರನ್ನು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ಪಕ್ಕದ ಆಫ್ರಿಕನ್ ದೇಶಗಳಿಂದ ಬಾಡಿಗೆ ಸೈನಿಕರನ್ನು ರಷ್ಯಾ ಭರ್ತಿ ಮಾಡಿಕೊಂಡಿದೆ ಎಂಬ ವರದಿಗಳೂ ಇವೆ. ಊಟಕ್ಕೂ ಬಡಿದಾಡುತ್ತಿರುವ ಹಲವು ದೇಶಗಳಲ್ಲಿಯ ಬಡ ನಾಗರಿಕರು ರಷ್ಯಾ ತೋರಿಸಿರುವ ಹಣದ ಆಸೆಯಿಂದ, ತಮ್ಮ ಕುಟುಂಬವನ್ನು ಸಾಕಬಹುದೆಂಬ ಎಣಿಕೆಯಿಂದ ರಷ್ಯಾ ಸೇನೆಯನ್ನು ಸೇರಿದ್ದಾರೆ ಹಾಗೂ ಸೇರುತ್ತಲೇ ಇದ್ದಾರೆ.

ಫ್ರಂಟ್ ಲೈನ್​ನಲ್ಲಿ ಯುದ್ಧಮಾಡುವ ಇಂಥ ಬಾಡಿಗೆ ಸೈನಿಕರಿಗೆ ತಿಂಗಳಿಗೆ ಆರು ಸಾವಿರ ಡಾಲರ್ ಹಾಗೂ ಬ್ಯಾಕ್​ನಲ್ಲಿ ಹೋರಾಡುವ ಸೈನಿಕರಿಗೆ ಮೂರು ಸಾವಿರ ಡಾಲರ್ ಕೊಡುವುದಾಗಿ ರಷ್ಯಾ ಹೇಳಿದೆ ಎಂಬ ವರದಿಗಳು ರಷ್ಯಾದ ಕರಾಳ ಮುಖವನ್ನು ಬಿಚ್ಚಿಡುತ್ತವೆ. ಸತ್ತರೆ ಅಂಥ ಬಾಡಿಗೆ ಸೈನಿಕರ ಕುಟುಂಬಕ್ಕೆ 50ಸಾವಿರ ಡಾಲರ್ ಕೊಡಲಾಗುವುದು ಎಂಬ ರಷ್ಯಾದ ಆಮಿಷವೂ ಅಂಥ ಮುಗ್ದ ಬಡವರನ್ನು ಯುದ್ಧದಲ್ಲಿ ಹೋರಾಡಲು ಪ್ರೇರೇಪಿಸುತ್ತಿದೆ. ಸಾಯುವುದು ಖಚಿತವೆಂದು ತಿಳಿದಿದ್ದರೂ ಸೈನ್ಯದಲ್ಲಿ ಭರ್ತಿಯಾಗಿ ಹೆಣವಾಗುತ್ತಿರುವ ಇಂಥ ಸೈನಿಕರು ಇಲ್ಲಿ ಬರಿ ರಷ್ಯಾದ ಅಸ್ತ್ರಗಳಂತೆ ಬಳಸಲ್ಪಡುತ್ತಿದ್ದಾರೆಯೇ ಹೊರತು ಮತ್ತೇನಿಲ್ಲ. ಈ ರೀತಿ ಸಾಯುತ್ತಿರುವ ಬಾಡಿಗೆ ರಷ್ಯನ್ ಸೈನಿಕರ ಬಗ್ಗೆಯೂ ಜಗತ್ತು ಸಹಾನುಭೂತಿ ತೋರಿಸಲೇಬೇಕಿದೆ. ಏಕೆಂದರೆ ಇವರೆಲ್ಲ ಪುಟಿನ್ ಕೊಡುವ ದುಡ್ಡಿಗಾಗಿ ಯುದ್ಧ ಭೂಮಿಗೆ ಬಂದಿರುವವರೆ ಹೊರತು ಅವರಾರಿಗೂ ಯುದ್ಧ ಬೇಕಿಲ್ಲ. ಆದರೆ ಅದೇ ರಷ್ಯಾದ ಇನ್ನೂ ಹಲವು ಸೈನಿಕರ ಮನಸ್ಥಿತಿಯನ್ನು ನೋಡುವುದಾದರೆ ಅವರು ಉಕ್ರೇನ್​ನಲ್ಲಿನ ಹೆಂಗಸರನ್ನು ಅತ್ಯಾಚಾರ ಮಾಡಿ, ಮನೆ, ಅಂಗಡಿಗಳನ್ನು ಲೂಟಿ ಮಾಡುತ್ತಿರುವುದನ್ನು ನೋಡಿದರೆ ಮನುಷ್ಯನ ಹಲವು ಮುಖಗಳು ನಮಗಿಲ್ಲಿ ಕಾಣಸಿಗುತ್ತವೆ.

ಅತ್ಯಾಚಾರ ಸಂತ್ರಸ್ತೆಯ ಸುಟ್ಟುಹೋಗಿರುವ ಮನೆ

ಬಿಬಿಸಿ ಸಂದರ್ಶನ ಮಾಡಿರುವ ಹೆಂಗಸೊಬ್ಬಳು ಹೇಳಿರುವ ಕಥೆ ಕೇಳಿದರೆ ಎಂಥವರ ಮನಸ್ಸೂ ಕದಡಿಹೋಗುತ್ತದೆ. ಅವಳು ಹೇಳುವಂತೆ ರಷ್ಯನ್ ಸೈನಿಕನೊಬ್ಬ ಅವಳ ಮನೆಯ ಬಳಿ ಬಂದು ಅವಳನ್ನು ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರವೆಸಗುತ್ತಾನೆ. ಅವನು ಇನ್ನೂ ತರುಣನಾಗಿದ್ದು, ಚೆಚೆನ್ಯಾದ ಬಾಡಿಗೆ ಸೈನಿಕನಂತಿದ್ದ ಎಂದು ಅವಳು ಹೇಳಿದ್ದಾಳೆ. ಅವನು ಅತ್ಯಾಚಾರವೆಸಿಗಿದ ನಂತರ ಮತ್ತೂನಾಲ್ವರು ರಷ್ಯನ್ ಸೈನಿಕರು ಬಂದರು. ಅವರೂ ಸಹ ನನ್ನನ್ನು ಅತ್ಯಾಚಾರ ಮಾಡಬಹುದು ಎಂದು ನಾನಂದುಕೊಂಡೆ. ಆದರೆ ಅವರು ಆ ಸೈನಿಕನನ್ನು ಕರೆದೊಯ್ದರು. ನಂತರ ನಾನು ಅವನನ್ನು ಎಂದೂ ನೋಡಲಿಲ್ಲ.

ಹೀಗೆ ರಷ್ಯಾದ ಇತರ ಸೈನಿಕರು ನನ್ನನ್ನು ಉಳಿಸಿದರು. ನಾನು ಮನೆಗೆ ಧಾವಿಸಿದೆ. ಅಲ್ಲಿ ಗಂಡನ ಹೊಟ್ಟೆಗೆ ಗುಂಡು ಬಿದ್ದಿತ್ತು. ಗುಂಡುಗಳ ದಾಳಿ ನಡೆಯುತ್ತಲೇ ಇತ್ತು. ಹಾಗಾಗಿ ನಾನು ಪಕ್ಕದ ಮನೆಗೆ ಧಾವಿಸಿ ಅಲ್ಲಿ ಅವರ ಶರಣು ಪಡೆದೆವು. ಆದರೆ ಅವರು ನನ್ನ ಗಂಡನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಲಿಲ್ಲ. ಏಕೆಂದರೆ ಸುತ್ತಮುತ್ತಲೂ ನಿರಂತರವಾಗಿ ಗುಂಡಿನ ದಾಳಿ ನಡೆಯುತ್ತಲೇ ಇತ್ತು. ನಂತರ ನನ್ನ ಗಂಡ ಸತ್ತುಹೋದರು. ನನ್ನ ಮನೆ ಸುಟ್ಟುಹೋಗಿದೆ ಎಂದು ಎಂದೂ ನಿಲ್ಲದ ಅಳುವಿನೊಡನೆ ಮಹಿಳೆ ಸಂದರ್ಶನ ನೀಡಿದ್ಧಾಳೆ.

ಸಂತ್ರಸ್ತ ಮಹಿಳೆಯ ಗಂಡನ ಸಮಾಧಿ

ಇಂಥ ಕರಾಳ ಯುದ್ಧದ 47ನೆಯ ದಿನವಿಂದು.. ಉಕ್ರೇನ್ ಸೈನ್ಯ ಬಸವಳಿದು ಹೋಗಿದೆ. ಹಾಗೆ ನೋಡಿದರೆ ದೈತ್ಯ ರಷ್ಯಾದೆದುರು ಉಕ್ರೇನ್ ಅತಿ ಪುಟ್ಟ ರಾಷ್ಟ್ರ. ಆದರೂ ರಷ್ಯಾವನ್ನು ಇದುವರೆಗೂ ತಡೆದಿರುವುದು ಅದರ ಸಾಧನೆಯೇ ಸರಿ. ಆದರೆ ರಾಷ್ಟ್ರಪ್ರೇಮದ ಹೆಸರಿನಲ್ಲಿ ಮತ್ತು ಝಿಲೆನ್ಸ್ಕಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಈ ರೀತಿ ಉಕ್ರೇನಿನ ಲಕ್ಷಾಂತರ ಜನರನ್ನು ಸಾವಿನ ದವಡೆಗೆ ನೂಕಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಕಾಡುತ್ತದೆ. ರಷ್ಯಾ ಆಕ್ರಮಣ ಮಾಡಿದಾಗ ನ್ಯಾಟೋ ಸಹಾಯಕ್ಕೆ ಬರುತ್ತದೆ ಎಂಬುದು ಝಿಲೆನ್ಸ್ಕಿಯ ಅನಿಸಿಕೆಯಾಗಿತ್ತು. ಆದರೆ ನ್ಯಾಟೋದ ಕೆಲ ರಾಷ್ಟ್ರಗಳು ಸ್ವಲ್ಪಮಟ್ಟಿನ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದು ಬಿಟ್ಟರೆ ಹಾಗೂ ರಷ್ಯಾದ ಆಕ್ರಮಣ ಖಂಡಿಸಿ, ವ್ಯಾಪಾರದ ಬಹಿಷ್ಕಾರ ಮಾಡಿದ್ದು ಬಿಟ್ಟರೆ, ಯುದ್ಧಕ್ಕೆ ನೇರವಾಗಿ ಎಂಟ್ರಿ ಕೊಡಲಿಲ್ಲ. 3ನೇ ವಿಶ್ವಯುದ್ಧದ ಭೀತಿ ಮತ್ತು ರಷ್ಯಾ ಅಣುದಾಳಿ ನಡೆಸಬಹುದೆಂಬ ಭೀತಿ ಅಮೆರಿಕಾ ಸೇರಿದಂತೆ ಹಲವು ದೇಶಗಳನ್ನು ಕಾಡಿದ್ದರಿಂದ, ಅವುಗಳು ನೇರವಾಗಿ ಯುದ್ಧಕ್ಕೆ ಧುಮುಕಲಿಲ್ಲ.

ಇದು ಯುದ್ಧ ಶುರುವಾದ ವಾರದಲ್ಲೇ ಝಿಲೆನ್ಸ್ಕಿಗೆ ಗೊತ್ತಾದಾಗ ಅವನು ರಷ್ಯಾದ ಬೇಡಿಕೆಯಂತೆ ನ್ಯಾಟೋ ಸೇರುವುದಿಲ್ಲ ಎಂಬ ಶರತ್ತಿಗೆ ಒಪ್ಪಿ, ಏಕಪಕ್ಷೀಯವಾಗಿ ಯುದ್ಧವಿರಾಮ ಘೋಷಿಸಿದ್ದರೆ ಇಂದು ಉಕ್ರೇನ್​ಗೆ ಆಗಿರುವ ನಷ್ಟದಲ್ಲಿ ಒಂದು ಪರ್ಸೆಂಟ್​ನಷ್ಟು ನಷ್ಟವೂ ಆಗುತ್ತಿರಲಿಲ್ಲ. ರಷ್ಯಾದ ಬಯಕೆಯಂತೆ ಝಿಲೆನ್ಸ್ಕಿ ರಾಜೀನಾಮೆ ಕೊಟ್ಟುಬಿಟ್ಟಿದ್ದರೂ ಸಹ ಉಕ್ರೇನ್​ನ ಜನರು ಹುಳುಗಳಂತೆ ಸಾಯುತ್ತಿರಲಿಲ್ಲ. ಹಾಗೆಂದು ಪುಟಿನ್ ಮಾಡಿದ್ದು ಸರಿಯೆಂದು ಹೇಳುತ್ತಿಲ್ಲ. ಆದರೆ ಒಬ್ಬ ದುಷ್ಟ ರಾಕ್ಷಸ ತಮ್ಮ ಜನರನ್ನು ಕೊಲ್ಲಲು ಬಂದಾಗ ಪ್ರಜೆಗಳ ಪ್ರಾಣ ರಕ್ಷಣೆಯನ್ನು ಯಾವುದೇ ರೀತಿಯಿಂದ ಮಾಡುವುದು ನಾಯಕನಾದವನ ಕರ್ತವ್ಯವೆ ಹೊರತು ತನ್ನ ಅಧಿಕಾರವಲ್ಲ.

ಝಿಲೆನ್ಸ್ಕಿ ರಾಜೀನಾಮೆ ನೀಡಿ ಅಲ್ಲಿಂದ ಅಮೆರಿಕಾ ಅಥವ ಇತರ ಯಾವುದೇ ಮಿತ್ರ ದೇಶಕ್ಕೆ ಹೋಗಿ ನಂತರದ ದಿನಗಳಲ್ಲಿ ಏನು ಮಾಡಬಹುದು ಎಂಬುದನ್ನು ನೋಡಬಹುದಿತ್ತು. ಇದರಿಂದ ಉಕ್ರೇನ್ ಸೈನ್ಯ ಹಾಗೂ ನಾಗರಿಕರ ಪ್ರಾಣ ಉಳಿಸಬಹುದಿತ್ತು. ಆದರೆ ಝಿಲೆನ್ಸ್ಕಿ ಇಂದಿಗೂ ತನ್ನ ಅಧ್ಯಕ್ಷ ಪಟ್ಟವನ್ನು ತ್ಯಜಿಸುವ ಮಾತನ್ನೇ ಆಡುತ್ತಿಲ್ಲ. ಬದಲಿಗೆ ಮಾರಿಯೋಪೋಲ್​ನಲ್ಲಿ ಸಾವಿರಾರು ಉಕ್ರೇನಿಗರು ಸಾವನ್ನಪ್ಪಿದ್ದಾರೆ, ನಮ್ಮ ಮದ್ದುಗುಂಡುಗಳು ಖಾಲಿಯಾಗುತ್ತಿವೆ ಎಂದು ಅವಲತ್ತುಕೊಂಡಿದ್ದಾನೆ.

ಯುದ್ಧದಲ್ಲಿ ಸೋತವನು ಸತ್ತ, ಗೆದ್ದವನು ಸೋತ ಎಂಬ ಗಾದೆಯಿದೆ. ಇಲ್ಲಿ ಸೋತ ಉಕ್ರೇನ್ ಎಷ್ಟರ ಮಟ್ಟಿಗೆ ಬರ್ಬಾದ್ ಆಗಿ ಹೋಗಿದೆಯೆಂದರೆ ಅದು ಮೊದಲಿನ ಸ್ಥಿತಿಗೆ ಬರಲು ಇನ್ನೂ ಇಪ್ಪತ್ತು ಮೂವತ್ತು ವರ್ಷಗಳೇ ಬೇಕಾಗಬಹುದು. ಇನ್ನು ಯುದ್ಧದಲ್ಲಿ ರಷ್ಯಾ ಗೆದ್ದರೂ, ಅದರ ಆರ್ಥಿಕ ಪರಿಸ್ಥಿತಿಯೂ ಅತ್ಯಂತ ಹದಗೆಟ್ಟುಹೋಗಿದೆ. ಯುದ್ಧದಿಂದಾಗಿ ರಷ್ಯದ ರೂಬೆಲ್ ಮೌಲ್ಯ ಕುಸಿದು ಪಾತಾಳಕ್ಕಿಳಿದಿದೆ. ಜಗತ್ತಿನ ಮುಕ್ಕಾಲು ದೇಶದೊಂದಿಗಿನ ವ್ಯಾಪಾರ ವಹಿವಾಟು ರಷ್ಯಾ ಪಾಲಿಗೆ ಇಲ್ಲವಾಗಿದೆ. ವಿಶ್ವಸಂಸ್ಥೆಯಿಂದ ರಷ್ಯಾವನ್ನು ಉಚ್ಛಾಟಿಸಲಾಗಿದೆ. ರಷ್ಯಾ ಕ್ರೀಡಾಪಟುಗಳಿಗೆ ಜಾಗತಿಕ ಕ್ರೀಡಾಕೂಟಗಳಿಂದ ಬಹಿಷ್ಕರಿಸಲಾಗಿದೆ. ಒಂದು ದೇಶ ಹಾಳಾಗಲು ಇದಕ್ಕಿಂತ ಇನ್ನೇನು ಬೇಕು? ದೇಶವೆಂದರೆ ಅದು ರೂಪುಗೊಳ್ಳುವುದೇ ಅಲ್ಲಿನ ಪ್ರಜೆಗಳಿಂದ. ಹಾಗಾಗಿ ಒಬ್ಬ ಮಹಾದುಷ್ಟ ಪುಟಿನ್​ನಿಂದಾಗಿ ರಷ್ಯಾದ ಕೋಟಿ ಕೋಟಿ ಜನರ ಭವಿಷ್ಯ ಇಂದು ಅಂಧಕಾರಮಯವಾಗಿದೆ.

ಆದ್ದರಿಂದಲೇ ಹೇಳಿದ್ದು ಸೋತವನು ಸತ್ತ, ಗೆದ್ದವನು ಸೋತ ಎಂದು! ಸ್ಪೆಷಲ್ ಡೆಸ್ಕ್​ನಿಂದ ಓಂಪ್ರಕಾಶ್ ನಾಯಕ್, ಬಾಲಾಜಿ ಮಿಡಿಯಾ24×7ಲೈವ್​ಕನ್ನಡ ನ್ಯೂಸ್​ಬ್ಯೂರೊ.  

Spread the love

Related Articles

Leave a Reply

Your email address will not be published. Required fields are marked *

Back to top button