
ಬಿಜೆಪಿ ನಿರ್ಧರಿಸಿಯಾಗಿದೆ.. ಏನೇ ಆಗಲಿ ಮುಂದಿನ ಚುನಾವಣೆಯಲ್ಲಿ ಪ್ರತಿಯೊಬ್ಬ ಹಿಂದೂವಿನ ಮತ ತಮಗೆ ಬರಲೇಬೇಕೆಂದು. ಅದಕ್ಕಾಗಿ ಮಾಡಬಾರದ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡುತ್ತಿದೆ. ಯಾವುದೇ ಮುಲಾಜಿಲ್ಲದೆ ಅನ್ಯಕೋಮನ್ನು ತನ್ನ ಸರ್ಕಾರಿಯೇತರ ಪಡೆಗಳ ಮೂಲಕ ಉಸಿರುಗಟ್ಟಿಸುತ್ತಿದೆ. ಆ ಮೂಲಕ ಒಡೆದು ಆಳುವ ನೀತಿಯನ್ನು ಸ್ಪಷ್ಟವಾಗಿ ಅನುಸರಿಸುತ್ತಿದೆ.
ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ, ಇನ್ನೂ ಅದರ ಯಾವುದೇ ವಿವರ ಬರುವ ಮುನ್ನವೇ ಬಿಜೆಪಿ ಮುಖಂಡ ಈಶ್ವರಪ್ಪ ಆದಿಯಾಗಿ ಹಲವು ಬಿಜೆಪಿ ಮುಖಂಡರು ಇದನ್ನು ಮುಸ್ಲಿಮರು ಹಿಂದೂಗಳ ಮೇಲಿನ ದ್ವೇಷಕ್ಕೆ ಮಾಡಿದ್ದಾರೆ ಎಂದು ತೀರ್ಪು ನೀಡಿ ಹೇಳಿಕೆ ನೀಡಿಬಿಟ್ಟಿದ್ದರು. ಅದರ ಪರಿಣಾಮವೇನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೆ. ಈ ಹೇಳಿಕೆಯ ನಂತರ ಇಡೀ ಶಿವಮೊಗ್ಗ ಹೊತ್ತಿ ಉರಿಯಿತು. ಆದರೆ ವಿಪರ್ಯಾಸವೆಂದರೆ ಹರ್ಷ ಕೊಲೆ ಯಾಕಾಯಿತು ಎಂಬುದರ ತನಿಖೆ ಇನ್ನೂ ನಡೆಯುತ್ತಿದೆ! ಹಾಗಾದರೆ ಕೋಮುಗಲಭೆಗೆ ಕಾರಣವಾದ ಈಶ್ವರಪ್ಪ ಹಾಗೂ ಹಲವು ಬಿಜೆಪಿ ನಾಯಕರ ಹೇಳಿಕೆಗೆ ಯಾವುದೇ ಶಿಕ್ಷೆ ಇಲ್ಲವೆ?
ಈಗ ಅದೇ ರೀತಿಯ ಮತೀಯ ಬಣ್ಣವನ್ನು ಚಂದ್ರು ಹತ್ಯೆಗೆ ಬಳಿಯಲಾಗುತ್ತಿದೆ. ಮಧ್ಯರಾತ್ರಿ ನಡೆದ ಕೊಲೆಯ ನಂತರ, ಅದರ ಪ್ರತ್ಯಕ್ಷದರ್ಶಿ ಸೈಮನ್ ಎನ್ನುವ ಯುವಕ ಪೊಲೀಸರಿಗೆ ನೀಡಿದ ಪ್ರಥಮ ಮಾಹಿತಿ ಹೇಳಿಕೆಯಲ್ಲಿ ಉರ್ದು ಮಾತನಾಡದಿದ್ದದ್ದಕ್ಕೆ ಕೊಲೆ ಮಾಡಿದರು ಎಂದು ಹೇಳಿಯೇ ಇಲ್ಲ. ಇದನ್ನು ಸ್ವತಃ ಕಮೀಷನರ್ ಕಮಲ್ ಪಂತ್ ಅವರೇ ಸೈಮನ್ ವಿಡಿಯೋ ಸಾಕ್ಷಿ ಬಿಡುಗಡೆ ಮಾಡುವ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಹಾಗಾದರೆ ಸ್ವತಃ ಗೃಹಸಚಿವರೇ ಉರ್ದು ಮಾತನಾಡದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ಹೇಗೆ ಹೇಳಿದರು? ಇದೊಂದು ಗುರುತರ ಅಪರಾಧವಲ್ಲವೆ? ಗೃಹಸಚಿವರಾದ ಮಾತ್ರಕ್ಕೆ ಅವರು ಕಾನೂನಿಗೆ ಅತೀತರೆ?
ಗೃಹಸಚಿವರಷ್ಟೇ ಅಲ್ಲ ರವಿಕುಮಾರ್ ಎಂಬ ಎಂಎಲ್ಸಿ ಸೈಮನ್ಗಿಂತ ತಾನೇ ಸ್ಪಷ್ಟವಾಗಿ ನೋಡಿರುವಂತೆ ಉರ್ದು ಬರಲ್ಲ ಎಂದಿದ್ದಕ್ಕೆ ಚುಚ್ಚಿ ಚುಚ್ಚಿ ಕೊಂದಿದ್ದಾರೆ ಎಂದು ಹೇಳಿದ್ದಾನೆ. ಮೊದಲು ಇಂಥ ಕೋಮುಗಲಭೆ ಸೃಷ್ಟಿಸುವವರನ್ನು ಹೆಡೆಮುರಿ ಕಟ್ಟಿ ಒಳಗೆ ಹಾಕಬೇಕು. ಇಲ್ಲದಿದ್ದರೆ ಇವರು ಈ ರೀತಿ ಹಚ್ಚುವ ಬೆಂಕಿಯಿಂದ ಸಮಾಜ ಸುಟ್ಟು ಬೂದಿಯಾಗುತ್ತದೆ. ಈ ಮಾತನ್ನು ಇಷ್ಟು ಖಾರವಾಗಿ ಹೇಳಲು ಕಾರಣವೆಂದರೆ ಸೈಮನ್ ಮಾಧ್ಯಮದೆದುರು ಹೇಳಿದ ಹೇಳಿಕೆಯನ್ನು ನಾನು ಖುದ್ದಾಗಿ ನೋಡಿದೆ. ಆ ಮೂರ್ಖ ಒಂದು ನಿಮಿಷದ ವಿಡಿಯೋದಲ್ಲಿ ಎರಡು ರೀತಿಯಲ್ಲಿ ಹೇಳಿದ್ದು ಕೇಳಿ ಅವನು ಖಂಡಿತ ಸುಳ್ಳು ಹೇಳುತ್ತಿದ್ದಾನೆ ಎಂಬುದರಲ್ಲಿ ನನಗೆ ಸಂಶಯ ಉಳಿಯಲಿಲ್ಲ. ಏಕೆಂದರೆ ಮೊದಲ ಅರ್ಧ ನಿಮಿಷದಲ್ಲಿ ಬೈಕನ್ನು ಬೇಕೆಂತಲೇ ಡಿಕ್ಕಿ ಹೊಡೆದು ನಂತರ ಚಾಕು ಹಿಡಿದುಕೊಂಡು ಬಂದು ನನ್ನ ಕಣ್ಣೆದುರೇ ಚಂದ್ರುಗೆ ಚುಚ್ಚಿದರು ಎಂದು ಹೇಳಿದ ಸೈಮನ್, ನಂತರದ ಅರ್ಧ ನಿಮಿಷದಲ್ಲಿ ನಾನು ಚಂದ್ರುಗೆ ಓಡಿ ಹೋಗಲು ಕೂಗಿ ಹೇಳಿ ಓಡಿಹೋದೆ. ಹಾಗಾಗಿ ಚಂದ್ರುಗೆ ಅವರು ಚುಚ್ಚಿದ್ದು ನಾನು ನೋಡಲೇ ಇಲ್ಲ. ಆದರೆ ನಂತರ ಅಲ್ಲಿಗೆ ಮರಳಿ ಬಂದಾಗ ಅಲ್ಲಿ ಚಂದ್ರು ಕೊಲೆಯಾಗಿ ಬಿದ್ದಿದ್ದ ಎಂದು ಹೇಳಿದ. ಹೀಗೆ ಒಂದೇ ಹೇಳಿಕೆಯಲ್ಲಿ ಎರಡೆರಡು ರೀತಿ ಹೇಳುವ ಸೈಮನ್ನನ್ನು ಪೊಲೀಸರು ಸರಿಯಾಗಿ ವಿಚಾರಿಸಿಕೊಳ್ಳಬೇಕಾಗಿದೆ.
ರೋಷನ್ ಬೇಗ್ ಆರೋಪಿಸಿರುವಂತೆ ಬಿಜೆಪಿಯವರು ಸೈಮನ್ಗೆ ಹತ್ತು ಲಕ್ಷ ಕೊಟ್ಟಿದ್ದಾರೆಯೇ ಎಂಬುದನ್ನೂ ಈಗ ವಿಚಾರಣೆಗೆ ಒಳಪಡಿಸಬೇಕಾಗಿದೆ. ಇದರ ಮಧ್ಯೆ ಸಿಟಿ ರವಿ ಮುಂತಾದ ಶಾಸಕರು ಕೋಮುಗಲಭೆ ಸೃಷ್ಟಿಸಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದನ್ನು ಮೊದಲು ತಡೆಯಬೇಕು. ಇದನ್ನು ಸರ್ಕಾರ ಮಾಡುವಲ್ಲಿ ವಿಫಲವಾದರೆ, ನಮ್ಮ ಘನ ಉಚ್ಛ ನ್ಯಾಯಾಲಯವೇ ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ಆದೇಶವನ್ನು ನೀಡಿದರೆ ಪರಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಬಹುದೇನೊ. ಇದೀಗ ಬೊಮ್ಮಾಯಿ ತಮ್ಮ ಅಧೀನದಲ್ಲಿರುವ ಪೊಲೀಸರನ್ನೇ ದೂರ ಮಾಡಿ ಈ ಪ್ರಕರಣವನ್ನು ಸಿಐಡಿಗೆ ವಹಿಸಿರುವುದು ಒಂದು ಸರ್ಕಾರದ ನಾಚಿಕೆಗೇಡಿನ ಪರಮಾವಧಿ ಎಂಬುದರಲ್ಲಿ ಎರಡು ಮಾತಿಲ್ಲ.
ಓಂಪ್ರಕಾಶ್ ನಾಯಕ್, ಹಿರಿಯ ಉಪ ಸಂಪಾದಕರು, BMG24x7ಲೈವ್ಕನ್ನಡ