ಅಭಿಮತಸಂಪಾದಕೀಯ

ನ್ಯಾಯಾಂಗಕ್ಕೆ ಮಾದರಿಯಾದ ಪಾಕ್ ಸರ್ವೋಚ್ಛ ನ್ಯಾಯಾಲಯ

ಪಾಕಿಸ್ತಾನದಲ್ಲಿ ಇನ್ನೂ ಪ್ರಜಾಪ್ರಭುತ್ವ ಜೀವಂತವಾಗಿದೆ; ಅದಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಬಹುಮುಖ್ಯ ಅಂಗವಾದ ನ್ಯಾಯಾಂಗ ಭಾರತಕ್ಕಿಂತ ಹೆಚ್ಚು ಸಕ್ರೀಯವಾಗಿದೆ ಹಾಗೂ ಜೀವಂತಿಕೆಯಿಂದ ಕೂಡಿದೆ ಎಂದರೆ ಅದು ದೇಶದ್ರೋಹವಾಗಲಿಕ್ಕಿಲ್ಲ! ಇದನ್ನು ಹೇಳಲು ಕಾರಣ ನಾವು ಸದಾ ನಮ್ಮ ತಟ್ಟೆಯಲ್ಲಿ ಸತ್ತು ಬಿದ್ದಿರುವ ಕತ್ತೆಯನ್ನು ನೋಡುವುದು ಬಿಟ್ಟು, ಪಾಕಿಸ್ತಾನದ ತಟ್ಟೆಯಲ್ಲಿ ಸತ್ತು ಬಿದ್ದಿರುವ ನೊಣದ ಬಗ್ಗೆ ಅಪಹಾಸ್ಯ ಮಾಡುತ್ತ ಇರುತ್ತೇವೆ! ಪಾಕಿಸ್ತಾನದಲ್ಲಿ ಅಷ್ಟೊಂದು ಭ್ರಷ್ಟಾಚಾರವಂತೆ, ಅಲ್ಲಿ ಅಗತ್ಯ ವಸ್ತುಗಳ ಬೆಲೆ ಅಷ್ಟು ಹೆಚ್ಚಾಗಿದೆಯಂತೆ, ಪಾಕಿಸ್ತಾನದ ಜನರೆಲ್ಲರೂ ಭಿಕ್ಷೆ ಬೇಡುತ್ತಿದ್ದಾರಂತೆ, ಅಲ್ಲಿನ ಸರ್ಕಾರ ದಿವಾಳಿಯಾಗಿದೆಯಂತೆ..! ಹೀಗೆ ಅಂತೆ ಕಂತೆಗಳ ಆಡುಕೊಳ್ಳುವುದಕ್ಕೆ ನಾವು ಪಾಕಿಸ್ತಾನವನ್ನು ವಿಷಯವನ್ನಾಗಿಸಿಕೊಳ್ಳುತ್ತೇವೆ! ಆದರೆ ಇದೇ ಪಾಕಿಸ್ತಾನದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಂತರ ಅಲ್ಲಿನ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪು ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದಿದೆ!

ಇಮ್ರಾನ್​ಖಾನ್ ಸರ್ಕಾರವನ್ನು ಬೀಳಿಸಲು ವಿರೋಧಪಕ್ಷಗಳು ಒಂದಾಗಿದ್ದು, ಅದಕ್ಕೆ ಇಮ್ರಾನ್​ ಸರ್ಕಾರಕ್ಕೆ ಬೆಂಬಲ ನೀಡಿದ್ದ ಹಲವು ಪಕ್ಷಗಳೂ ಹೋಗಿ ಸೇರಿಕೊಂಡಿದ್ದು, ಇದರಿಂದಾಗಿ ಇಮ್ರಾನ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಇನ್ನೇನು ಇಮ್ರಾನ್ ಸರ್ಕಾರ ಬಿದ್ದೇಬಿಡುತ್ತದೆ ಎಂದುಕೊಳ್ಳುವಷ್ಟರಲ್ಲಿ ಖಾನ್ ಸಿನಿಮೀಯ ರೀತಿಯಲ್ಲಿ ಉಪಾಧ್ಯಕ್ಷನ ಮೂಲಕ ಇಡಿ ಅವಿಶ್ವಾಸ ನಿರ್ಣಯದ ಪ್ರಕ್ರಿಯೆಯನ್ನೇ ರದ್ದುಗೊಳಿಸಿ, ಸಂಸತ್ತನ್ನು ವಿಸರ್ಜಿಸಿದ್ದು ಇವೆಲ್ಲ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇಮ್ರಾನ್ ಬೌನ್ಸರ್​ಗೆ ವಿಪಕ್ಷಗಳು ತತ್ತರಿಸಿಹೋಗಿದ್ದವು. ಉಪಸ್ಪೀಕರ್ ರೂಲಿಂಗನ್ನು ಪರಿಗಣಿಸಿದ ಪಾಕ್ ಅಧ್ಯಕ್ಷರು ಪ್ರಧಾನಿ ಇಮ್ರಾನ್ ಶಿಫಾರಸ್ಸಿನ ಪ್ರಕಾರ ಸಂಸತ್ತನ್ನೂ ಸಹ ವಿಸರ್ಜಿಸಿ ಚುನಾವಣೆಗೆ ಆದೇಶಿಸಿಬಿಟ್ಟಿದ್ದರು!

ಎಲ್ಲರೂ ಇನ್ನೇನು ಎಲ್ಲವೂ ಮುಗಿದೇಹೋಯಿತು ಎಂದುಕೊಂಡರು. ಬೇರೆ ದೇಶಗಳಲ್ಲಾಗಿದ್ದರೆ ಇಷ್ಟೆಲ್ಲಾ ಬೆಳವಣಿಗೆಗಳ ನಂತರ ನ್ಯಾಯಾಲಯ ಖಂಡಿತ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಅದರಲ್ಲೂ ವಿರೋಧಪಕ್ಷಗಳೇನಾದರೂ ನ್ಯಾಯಾಲಯಕ್ಕೆ ವಿವಾದವನ್ನು ಕೊಂಡೊಯ್ದರೆ ಪರಿಶೀಲಿಸಲು ಯೋಚಿಸುತ್ತಿತ್ತು ಅಥವಾ ತೀರ ಸರ್ಕಾರವನ್ನೇ ಎದುರುಹಾಕಿಕೊಳ್ಳುವುದು ಏಕೆ ಎಂದು ಪ್ರಕರಣವನ್ನು ವಜಾ ಮಾಡುತ್ತಿತ್ತು. ಆದರೆ ಪಾಕಿಸ್ತಾನದಲ್ಲಿ ಆದದ್ದೇ ಬೇರೆ! ಇಲ್ಲಿ ಪಾಕ್ ಸುಪ್ರೀಂ ಕೋರ್ಟ್​ ಸ್ವಯಂಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಎರಡು ಮೂರು ದಿನಗಳ ಕಾಲ ಖಡಕ್ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್​ ಹೊರದೇಶದವರ ಷಡ್ಯಂತ್ರ ಎಂಬ ಇಮ್ರಾನ್ ಸರ್ಕಾರದ ಕಾಗಕ್ಕ ಗುಬ್ಬಕ್ಕ ಕಥೆಯನ್ನು ಡಸ್ಟ್​ಬಿನ್​ಗೆ ಹಾಕಿ, ಅದಕ್ಕೂ ನಮಗೂ ಸಂಬಂಧವಿಲ್ಲ, ಇಲ್ಲಿ ಏನಿದ್ದರೂ ಸಂವಿಧಾನಕ್ಕನುಗುಣವಾಗಿ ವಿಚಾರಣೆಯಷ್ಟೇ ಎಂದು ಸ್ಪಷ್ಟಪಡಿಸಿತ್ತು.

ಇದಕ್ಕನುಗುಣವಾಗಿ ನಿನ್ನೆ ತೀರ್ಪು ನೀಡಿರುವ ಪಾಕ್ ಹೈಕೋರ್ಟ್​ ಇಮ್ರಾನ್​ಖಾನ್ ಹಾಗೂ ಉಪಸ್ಪೀಕರ್ ಇಬ್ಬರಿಗೂ ತೀವ್ರ ಮುಖಭಂಗ ಉಂಟುಮಾಡಿದೆ. ಇಮ್ರಾನ್ ನೇತೃತ್ವದ ಪಿಟಿಐ ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ರದ್ದುಗೊಳಿಸಿದ್ದ ಉಪಸ್ಪೀಕರ್ ಅವರ ನಿಲುವನ್ನು ಸುಪ್ರೀಂ ಕೋರ್ಟ್​ ಸಾರಾಸಗಟಾಗಿ ತಳ್ಳಿ ಹಾಕಿದೆ. ಅಲ್ಲದೆ, ಎಪ್ರಿಲ್ 9ರಂದೇ ಅವಿಶ್ವಾಸ ಗೊತ್ತುವಳಿ ಸಂಬಂಧ ಮತದಾನ ನಡೆಸಬೇಕು ಹಾಗೂ ರಾಷ್ಟ್ರೀಯ ಸಂಸತ್ತನ್ನು ಪುನರ್​ಸ್ಥಾಪಿಸಬೇಕು ಎಂದು ಕೋರ್ಟ್​ ಆದೇಶಿಸಿದೆ.

ಗುರುವಾರ ರಾತ್ರಿ ಅವಿಶ್ವಾಸ ಗೊತ್ತುವಳಿ ರದ್ದುಗೊಳಿಸಿದ ಪ್ರಕರಣಕ್ಕೆ ಸಬಂಧಿಸಿದಂತೆ ಪಾಕಿಸ್ತಾನ ಸುಪ್ರೀಂ ಕೋರ್ಟ್​ನ ಪಂಚ ಸದಸ್ಯರ ಪೀಠ ನೀಡಿರುವ ಈ ತೀರ್ಪಿನಿಂದಾಗಿ ಅಲ್ಪಮೊತ್ತಕ್ಕೆ ಕುಸಿದಿರುವ ಪಿಟಿಐ ಮೈತ್ರಿಕೂಟದ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಅವಿಶ್ವಾಸ ಮಂಡನೆ ದಿನ ಯಾವ ಸದಸ್ಯರಿಗೂ ಮತದಾನ ಮಾಡದಂತೆ ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಪಾಕ್ ಸುಪ್ರಿಂ ಕೋರ್ಟ್​ ಎಚ್ಚರಿಸಿದೆ. 342 ಸದಸ್ಯಬಲದ ಪಾಕ್ ಸಂಸತ್​ನಲ್ಲಿ ಸರ್ಕಾರದ ಬಹುಮತಕ್ಕೆ 172 ಸ್ಥಾನಗಳು ಬೇಕು. ಆದರೆ ಇಮ್ರಾನ್ ತೆಕ್ಕೆಯಲ್ಲಿರುವ ಸಂಸದರ ಬಲ 157ಕ್ಕಿಂತ ಕಡಿಮೆ. ಹಾಗಾಗಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯದ ಓಟಿಂಗ್​ನಲ್ಲಿ ಜಯಗಳಿಸುವುದು ಹಾಗೂ ಹೊಸ ಸರ್ಕಾರವನ್ನು ರಚಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಹೊಸ ಸರ್ಕಾರ ರಚನೆಯ ನಂತರ ಇಮ್ರಾನ್ ಹಾಗೂ ಉಪಸ್ಪೀಕರ್ ಮೇಲೆ ಸಂವಿಧಾನದ ದುರ್ಬಳಕೆಗಾಗಿ ವಿಚಾರಣೆ ನಡೆದರೂ ಸಹ ಅಚ್ಚರಿಯಿಲ್ಲ. ಇದು ಪಾಕಿಸ್ತಾನದ ಸುಪ್ರೀಂಕೋರ್ಟ್​ನ ಸಾಧನೆ. ಹಾಗಾದರೆ ನಮ್ಮ ದೇಶದ ಸುಪ್ರೀಂ ಕೊರ್ಟ್​ ಮತ್ತು ಹೈಕೋರ್ಟ್​ಗಳ ಸಾಧನೆ ಕಡಿಮೆಯೆ?  

ಖಂಡಿತ ಇಲ್ಲ! ನಮ್ಮ ನ್ಯಾಯಾಂಗಕ್ಕೆ ನಾವು ಯಾವುದೇ ಒಂದು ಪ್ರಕರಣವನ್ನು ಕೊಂಡೊಯ್ದರೂ ಅದನ್ನು ನ್ಯಾಯಾಲಯವು ಸ್ವೀಕರಿಸುತ್ತದೆ ಇಲ್ಲವೆ ಇದು ಅಷ್ಟು ಮುಖ್ಯವಾದ ಪ್ರಕರಣವಲ್ಲ, ನಿಧಾನವಾಗಿ ತೆಗೆದುಕೊಳ್ಳುತ್ತೇವೆ ಎನ್ನುತ್ತದೆಯೇ ಹೊರತು ತೆಗೆದುಕೊಳ್ಳುವುದಿಲ್ಲ ಎನ್ನುವುದಿಲ್ಲ!

ಯಾವುದಾದರೂ ಸಾರ್ವಜನಿಕ ಹಿತಾಸಕ್ತಿಯಡಿ ಪ್ರಕರಣ ದಾಖಲಿಸಿದರೆ ಅದನ್ನು ದಾಖಲಿಸಿದವರ ಮೇಲೆಯೇ ಜುಲ್ಮಾನೆ ಹಾಕುವುದು ನಮ್ಮಲ್ಲಿ ಸಾಮಾನ್ಯ. ಏಕೆಂದರೆ ಇದರಿಂದ ನ್ಯಾಯಾಲಯದ ಸಮಯ ನಷ್ಟವಾಗುತ್ತದೆ! ಈ ರೀತಿ ಕೇಸ್ ಹಾಕಿದವರು ಇನ್ನೊಮ್ಮೆ ನ್ಯಾಯವೇ ಕೇಳಲು ಬರಬಾರದು ಹಾಗೆ ಬುದ್ದಿ ಕಲಿಸುತ್ತದೆ ನಮ್ಮ ನ್ಯಾಯಾಲಯ! ಇದಕ್ಕೆ ಉದಾಹರಣೆಯಾಗಿ ನಾವು ನಟಿ ಜೂಹಿ ಚಾವ್ಲಾ 5ಜಿ ತರಂಗಾಂತರದಿಂದ ಪರಿಸರಕ್ಕೆ ಹಾಗೂ ಜೀವಿಗಳಿಗೆ ಎಷ್ಟೊಂದು ಹಾನಿಯಿದೆ ಎಂದು ದಾಖಲೆಗಳ ಸಹಿತ ಪ್ರಕರಣ ದಾಖಲಿಸಿದರೂ ಸಹ, ನ್ಯಾಯಾಲಯ ಕೊನೆಗೆ ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರಿಗೆ ಪ್ರಕರಣ ದಾಖಲಿಸಿದ್ದಕ್ಕೆ 20 ಲಕ್ಷ ರೂಪಾಯಿ ದಂಡ ವಿಧಿಸಿತು! ಈ ಪ್ರಕರಣದ ನಂತರ ಜೂಹಿ ಚಾವ್ಲಾ ಬುದ್ದಿ ಕಲಿತು ನ್ಯಾಯಾಲಯದ ಕ್ಷಮೆಯಾಚಿಸಿದರು!!

ಬಾಬ್ರಿ ಮಸೀದಿ ಪತನ

ಇದಕ್ಕೂ ಮೇಲ್ಪಟ್ಟು ಬಹು ಮುಖ್ಯವಾದ ಯಾವುದೇ ಒಂದು ತೀರ್ಪು ನೀಡುವುದಿದ್ದರೆ ಅದನ್ನು ಬಹುಸಂಖ್ಯಾತರ ಹಿತವನ್ನು ದೃಷ್ಟಿಯಲ್ಲಿರಿಸಿಕೊಂಡು ಅವರ ಪರವಾಗಿ ತೀರ್ಪು ನೀಡುತ್ತದೆ ನಮ್ಮ ಘನ ನ್ಯಾಯಾಲಯ! ಇದನ್ನು ನಾವು ರಾಮಜನ್ಮಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ನೋಡಬಹುದು. ಅಲ್ಲವೇ ಮತ್ತೆ, ನ್ಯಾಯ ಇರುವುದೇ ಬಹುಸಂಖ್ಯಾತರ ಕಡೆಗೆ! ಈ ವಿಷಯದಲ್ಲಿ ನಮ್ಮ ಘನ ನ್ಯಾಯಾಲಯದ ತೀರ್ಪು ಉಲ್ಲೇಖನೀಯ!

ಹಿಜಾಬ್ ವಿಷಯದಲ್ಲಿ ಜಡ್ಜ್ ಟೀಕಿಸಿ ಜೈಲಿಗೆ ಹೋದ ಚೇತನ್

ಇದೆಲ್ಲಕ್ಕೆ ಕಲಶವಿಟ್ಟಂತೆ ತನ್ನ ತೀರ್ಪಿನ ಬಗ್ಗೆ ಒಂದೇ ಒಂದು ಸಾಲು ಟೀಕಿಸಿದರೂ ಅವರನ್ನು ಹಿಡಿದು ಜೈಲಿಗೆ ಹಾಕುತ್ತದೆ ನಮ್ಮ ನ್ಯಾಯಾಲಯ. ಮತ್ತೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ಪ್ರಶ್ನಾತೀತರು. ಇವರನ್ನು ಯಾರೂ ಪ್ರಶ್ನಿಸುವಂತಿಲ್ಲ, ಟೀಕಿಸುವಂತಿಲ್ಲ ಎಂಬ ಸಣ್ಣ ಮಟ್ಟದ ಬುದ್ದಿಯೂ ಇಲ್ಲದಿದ್ದ ಮೇಲೆ ಅವರು ಜೈಲಿಗೆ ಹೋಗುವುದಕ್ಕೇ ಲಾಯಕ್ಕು. ಅದಕ್ಕೆ ತಾನೆ ನಮ್ಮ ಕನ್ನಡದ ಸುಂದರ ನಟ, ಆಕ್ಟಿವಿಸ್ಟ್ ಚೇತನ್ ಜೈಲಿನಲ್ಲಿ ಹದಿನೈದು ದಿನ ಮುದ್ದೆ ಮುರಿದು ಬಂದಿದ್ದು! ಹಿಜಾಬ್ ವಿಷಯದಲ್ಲಿ ನ್ಯಾಯಾಧೀಶರು ಪೂರ್ವಾಗ್ರಹ ಪೀಡಿತರು ಎಂದು ಚೇತನ್ ಹೇಳಿದ್ದರಿಂದ ನ್ಯಾಯಾಧೀಶರ ಗೌರವಕ್ಕೆ ಎಷ್ಟು ಧಕ್ಕೆಯಾಯಿತು ಗೊತ್ತ? ಪ್ರಜಾಪ್ರಭುತ್ವದಲ್ಲಿ ಹೀಗೆಲ್ಲ ಯಾರಾದರೂ ಹೇಳುತ್ತಾರೆಯೇ? ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು ಸಮಾನರು ಎಂಬ ಸತ್ಯವನ್ನು ಚೇತನ್ ಮರೆತರೆ ಅದು ಅವರ ತಪ್ಪಲ್ಲವೇ ಮತ್ತೆ?! ಆದ್ದರಿಂದಲೇ ಹೈಕೋರ್ಟ್​, ನಮ್ಮ ತಂಟೆಗೆ ಬಂದರೆ ಹುಷಾರ್ ಎಂಬ ಸಂದೇಶ ಈ ಮೂಲಕ ಜನತೆಗೆ ಕೊಟ್ಟಿದೆ. ಇದನ್ನು ಜನ ಅರ್ಥ ಮಾಡಿಕೊಂಡರೆ ಸಾಕು!

ಓಂಪ್ರಕಾಶ್ ನಾಯಕ್, ಹಿರಿಯ ಉಪ ಸಂಪಾದಕ, BMG24x7ಲೈವ್​ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button