
ಬಿಜೆಪಿ ಬಿಕ್ಕಟ್ಟು
——————————————————
ವರದಿ: ಸಂದೇಶ್ ಶೆಟ್ಟಿ ಆಜ್ರಿ
ಉಡುಪಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಪ್ರಸ್ತುತ ವಿಚಾರವೆಂದರೆ ಯಡಿಯೂರಪ್ಪ ಬದಲಾವಣೆಗೆ ಕೆಲವರು ತೆರೆಮರೆಯಲ್ಲಿ ಕಸರತ್ತು ನಡೆಸಿರುವುದು. ಅದರಿಂದಾಗಿಯೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು, ಶಾಸಕರ ಅಹವಾಲು ಕೇಳಿಸಿಕೊಳ್ಳು್ತ್ತಿದ್ದಾರೆ.
ಯಡಿಯೂರಪ್ಪ ವಿರುದ್ಧ ಬಿಜೆಪಿ ವಲಯದಲ್ಲಿ ಅಸಮಾಧಾನ ಭುಗಿಲೆದ್ದಿದೆ, ಮುಖ್ಯಮಂತ್ರಿ ಬದಲಾವಣೆಯ ಕುರಿತು ಪರ-ವಿರೋಧಗಳು ವ್ಯಕ್ತವಾಗಿದ್ದು, ತೆರೆಮರೆಯ ಹಿಂದೆ ಹಲವು ಬಗೆಯ ಕಸರತ್ತುಗಳು ನಡೆದಿರುವ ಹೊತ್ತಿನಲ್ಲಿ, ಬಿಎಸ್ವೈ ಆಪ್ತವಲಯದವರಾಗಿದ್ದ ಮತ್ತು ಈಗ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಎಲ್ಲೂ ಕಾಣಿಸಿಕೊಳ್ಳದಿರುವುದು ಒಂದು ಪ್ರಶ್ನೆಯಂತೆ ಗಮನಕ್ಕೆ ಬರುತ್ತಿರುವುದು ಸುಳ್ಳಲ್ಲ.
ಪ್ರತಿಯೊಂದು ವಿಚಾರದಲ್ಲಿ ಬಿಜೆಪಿಯ ಉಡುಪಿ ಚಿಕ್ಕಮಂಗಳೂರು ಸಂಸ್ಥೆ ಸಂಸದೆ ಯಡಿಯೂರಪ್ಪನವರ ಪರ ಬ್ಯಾಟಿಂಗ್ ಬೀಸುತ್ತಿದ್ದರು ಆದರೆ ಇತ್ತೀಚಿಗೆ ಶೋಭಾ ಕರಂದ್ಲಾಜೆಯವರ ಯಾವ ಧ್ವನಿಯೂ ಕೇಳದೆ ಇರುವುದು ಸಾರ್ವಜನಿಕ ವಲಯ ಹಾಗೂ ರಾಜಕೀಯ ವಲಯದಲ್ಲಿ ಒಂದಿಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಕೂಡ ಅಷ್ಟೊಂದು ಕೆಲಸಕಾರ್ಯಗಳಲ್ಲಿ ಪ್ರಚಲಿತದಲ್ಲಿಲ್ಲ. ಇಡೀ ಕ್ಷೇತ್ರದ ಜನರು ಶೋಭಾ ಕರಂದ್ಲಾಜೆಯನ್ನು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಶೋಭಾ ಎನ್ನುವ ಅಭಿಯಾನ ಕೂಡ ಮಾಡಿದರು. ಸಂಸದೆಯಾಗಿ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಹಾಗೂ ಕ್ಷೇತ್ರದ ಆಗುಹೋಗುಗಳ ಬಗ್ಗೆ ಸಾಮಾನ್ಯ ಜನರ ಜೊತೆಗೆ ಸಂಸದೆ ಬೆರೆಯುವುದಿಲ್ಲ ಎನ್ನುವ ಆರೋಪ ಹಾಗೂ ಜನಸಾಮಾನ್ಯರ ಜೊತೆಗೆ ಸಂಸದೆ ಬೆರೆಯುವುದನ್ನು ಕಮ್ಮಿ ಮಾಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ಅಸಮಾಧಾನವನ್ನು ಹಲವು ಬಾರಿ ಸಾಮಾಜಿಕ ಜಾಲತಾಣದ ಮೂಲಕ ಹೊರಹಾಕಿದ್ದು ಉಂಟು.
ಆದರೆ ಇತ್ತೀಚೆಗಿನ ಶೋಭಾ ಕರಂದ್ಲಾಜೆಯವರ ವರ್ತನೆ ಕೂಡ ಒಂದಿಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಇವರು ಪಕ್ಷದೊಳಗೆ ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆಯೇ? ಒಂದು ಕಾಲದಲ್ಲಿ ಯಡಿಯೂರಪ್ಪನವರ ಎಲ್ಲ ನಿರ್ಧಾರಗಳ ಹಿಂದಿನ ಸೂತ್ರಧಾರಿಯಂತೆ ಇದ್ದವರಾಗಿ ಗಮನ ಸೆಳೆದಿದ್ದ ಶೋಭಾ ಕರಂದ್ಲಾಜೆಯವರ ಇಂದಿನ ಮೌನ ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪಕ್ಷದಲ್ಲಿ ಯಡಿಯೂರಪ್ಪನವರ ಪರವಾಗಿ ಇದ್ದ ಶೋಭಾ ಕರಂದ್ಲಾಜೆ ಇತ್ತೀಚಿಗೆ ಯಡಿಯೂರಪ್ಪನವರ ಯಾವುದೇ ವಿಚಾರಕ್ಕೂ ತುಟಿ ಬಿಚ್ಚುತ್ತಿಲ್ಲ. ರಾಜಕಾರಣದಲ್ಲಿ ಯಾವುದೂ ಅನಿರೀಕ್ಷಿತವಲ್ಲ ಎಂಬುದೇ ಹೌದಾದರೂ, ಯಡಿಯೂರಪ್ಪನವರೆದುರಿನ ಬಿಕ್ಕಟ್ಟಿನ ದಿನಗಳು ಅವರ ಅತ್ಯಂತ ಆಪ್ತರನ್ನೆಲ್ಲ ಮೌನವಾಗಿಸಿರುವ ಹಾಗಿದೆ. ಶೋಭಾ ಕರಂದ್ಲಾಜೆಯವರ ಮೌನವನ್ನು ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಇದು ಸ್ವತಃ ಯಡಿಯೂರಪ್ಪನವರ ಅಸಹಾಕತೆಯೂ ಆಗಿದೆಯಲ್ಲವೆ ಎಂಬ ಮತ್ತೊಂದು ಪ್ರಶ್ನೆಯೂ ಉಳಿದುಬಿಡುತ್ತದೆ.