ಹು-ಧಾ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಪೋನ್ ಕದ್ದಾಲಿಕೆ ಪ್ರಕರಣಕ್ಕೆ ತಿರುವು

ಹುಬ್ಬಳ್ಳಿ: ರಾಜ್ಯ ರಾಜ್ಯಕಾರಣ ಸೇರಿದಂತೆ ಬಿಜೆಪಿಯಲ್ಲಿಯೂ ಸಾಕಷ್ಟು ಬಿರುಗಾಳಿ ಎಬ್ಬಿಸಿದ್ದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿನೆಪಿ ಶಾಸಕ ಅರವಿಂದ ಬೆಲ್ಲದ ಅವರ ಪೋನ್ ಕದ್ದಾಲಿಕೆ ಪ್ರಕರಣ ಈಗ ರೋಚಕ ತಿರುವು ಪಡೆದುಕೊಂಡಿದೆ. ಪೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಸ್ವತಃ ಹೇಳಿಕೆ ನೀಡಿ ತನಿಖೆಗೆ ಅಗ್ರಹಿಸಿದ್ದ ಬೆಲ್ಲದ, ಈಗ ತಮ್ಮ ಮನವಿಯನ್ನೇ ವಾಪಸ್ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಅರವಿಂದ ಬೆಲ್ಲದ ಈ ಪ್ರಕರಣ ಕುರಿತು ತನಿಖೆ ಹಾಗೂ ಸೂಕ್ತ ಭದ್ರತೆಗಾಗಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆಗೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
ಶಾಸಕರ ಮನವಿ ಮೇರೆಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ ಪಂಥ್, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎಸಿಪಿ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದರು. ಎಸಿಪಿ ತನಿಖೆ ಕೈಗೊಂಡು ಶಾಸಕರ ಹೇಳಿಕೆಯನ್ನು ಪಡೆದುಕೊಂಡಿದ್ದರು. ಮತ್ತೆ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಯುವರಾಜ್ ಸ್ವಾಮಿಯನ್ನು ಕರೆದುಕೊಂಡು ಬಂದು ತನಿಖೆ ಕೈಗೊಂಡು ಹಲವು ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದರು.
ಶಾಸಕ ಅರವಿಂದ ಬೆಲ್ಲದ ಅವರ ಆರೋಪದಂತೆ ಶಾಸಕರ ಮೊಬೈಲ್ಗೆ ಬಂದ ಕರೆಯ ಸಂಖ್ಯೆಯ ಜಾಡು ಪರಿಶೀಲನೆ ಮಾಡಿದ ತನಿಖಾಧಿಕಾರಿಗಳು. ಶಾಸಕರು ನೀಡಿದ ಆ ನಂಬರ್ ಮೂಲಕ ಒಂದು ಗಂಟೆ ಸಂಭಾಷಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇದರ ಕುರಿತು ಈಗ ಅಧಿಕಾರಿಗಳು ಶಾಸಕರನ್ನು ಪ್ರಶ್ನೆ ಮಾಡಿದ್ದು, ಈ ವೇಳೆ ಶಾಸಕರು ಅದು ತಮ್ಮ ಆಪ್ತರದ್ದು ಎಂದು ಹೇಳಿದ್ದಾರೆನ್ನಲಾಗುತ್ತಿದೆ. ಇನ್ನೂ ಶಾಸಕ ಅರವಿಂದ ಬೆಲ್ಲದರವರ ಪೋನ್ ಕದ್ದಾಲಿಕೆ ಪ್ರಕರಣ ಅವರಿಗೇ ಈಗ ತಿರುಗುಬಾಣವಾಗುವ ಸಾಧ್ಯತೆ ಇದೆ ಎಂದು ಕೇಳಿಬರುತ್ತಿದ್ದು, ಇದರಿಂದಾಗಿ ತಮ್ಮ ಅರ್ಜಿಯನ್ನು ಶಾಸಕರು ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಶಾಸಕ ಅರವಿಂದ ಬೆಲ್ಲದ ಅವರ ಮುಂದಿನ ನಡೆ ಏನೂ ಎನ್ನುವುದು ಈಗ ರಾಜಕೀಯ ವಲಯದಲ್ಲಿ ತುಂಬಾ ಕುತೂಹಲ ಮೂಡಿಸಿದ್ದು, ಅವರು ತಾವು ನೀಡಿದ ತನಿಖೆಯ ಕುರಿತ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತಾರೋ ಅಥವಾ ಯಾವ ನಡೆ ಅನುಸರಿಸುತ್ತಾರೋ ಎಂಬುದುನ್ನು ಕಾದುನೋಡಬೇಕಾಗಿದೆ.