ಬಿಎಸ್ವೈ ಬದಲಾವಣೆ ಕಸರತ್ತಿನಲ್ಲೂ ಪಾತ್ರಧಾರಿ; ‘ಸಂತೋಷ್ಜಿ’ ಟೀಂನ ಸಿ ಟಿ ರವಿ ಬೆಳೆದ ರೀತಿ!

ಕಿರುಗುಂದ ರಫೀಕ್
ದನ ಮೇಯಿಸುತ್ತಿದ್ದಾಗ ಹರಿಯುವ ಹಳ್ಳಕ್ಕೆ, ದೊಡ್ಡ ಬಾವಿಗಳಿಗೆ 15 ಅಡಿ ಎತ್ತರದಿಂದ ಜಿಗಿದು ಈಜಿ, ನೀರಿನಾಳಕ್ಕೆ ಹೋಗಿ ಹಿಡಿ ಮಣ್ಣು ತಂದು ತೋರಿಸಿ “ನೋಡು, ನಾನು ಗೆದ್ದೇ..” ಎಂದು ಬಾಲ್ಯದ ಸ್ನೇಹಿತರೊಂದಿಗೆ ಬೀಗುತ್ತಿದ್ದ ಚಿಕ್ಕಮಾಗರವಳ್ಳಿಯ ಸಿ.ಟಿ. ರವಿಯ ಯಶೋಗಾಥೆ ಹೇಳಲು ಹೋದರೆ ಸಾಕಷ್ಟಿದೆ.
ಕಾಲೇಜು ದಿನಗಳಲ್ಲಿ ಕೆಲಕಾಲ ಕಮ್ಯುನಿಸ್ಟ್ ಸಿದ್ಧಾಂತದ ವಿದ್ಯಾರ್ಥಿ ಸಂಘಟನೆಯಲ್ಲಿ ಸೇರಿ 1985ರ ನಂತರ ಇದ್ದಕ್ಕಿದ್ದಂತೆ ಎಬಿವಿಪಿಯಲ್ಲಿ ಗುರುತಿಸಿಕೊಂಡು ಆ ಮೂಲಕ ‘ಸಂಘ’ದ ಸಂಪರ್ಕ ಬೆಳೆದು ನಂತರ ಸ್ವಾಭಾವಿಕವಾಗಿ ಬಿಜೆಪಿ ಸೇರಿದ್ದಾರೆ. ಆ ಸಂದರ್ಭದಲ್ಲಿ ಬಾಬಾಬುಡನ್ ಗಿರಿಯಲ್ಲಿ ಗುರು ದತ್ತಾತ್ರೇಯ ದೇವರ ಅನುಗ್ರಹದಿಂದ ಹುರುಪಿನ ಚಟುವಟಿಕೆ ಆರಂಭವಾಯಿತು.
ಭಾವನಾತ್ಮಕ ವಿಚಾರದಲ್ಲಿ ಅಲ್ಪಸಂಖ್ಯಾತರ-ಬಹುಸಂಖ್ಯಾತರ ಒಡೆದು, ಬಿಜೆಪಿ ಅಭ್ಯರ್ಥಿಯಾಗಿ 2004ರಲ್ಲಿ ಚುನಾವಣೆಗೆ ನಿಂತು ಅಂದಿನ ಶಾಸಕ ಸಗೀರ್ ಅಹ್ಮದ್ ವಿರುದ್ಧ ಗೆದ್ದು, ನಂತರ ಅದೇ ದತ್ತಪೀಠ, ದತ್ತಜಯಂತಿ ವಿಷಯವನ್ನು ರಾಷ್ಟ್ರಮಟ್ಟದ ವಿಷಯವಾಗಿ ಬಿಂಬಿಸಿ, ಆ ಮೂಲಕ ಮತಬೇಟೆಯಾಡಿ ನಾಲ್ಕನೇ ಬಾರಿ ಶಾಸಕನಾಗಿ ಹಲವು ಹುದ್ದೆ, ಮಂತ್ರಿ ಸ್ಥಾನ ಗಳಿಸಿ ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವ ಸಿ.ಟಿ.ರವಿ ಈಗ ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಕುರ್ಚಿ ಕದನದಲ್ಲಿ ಪಾತ್ರಧಾರಿಯಾಗಿ ತೆರೆಮರೆಯ ಕಸರತ್ತಿನಲ್ಲಿ ತೊಡಗಿರುವುದು ಗುಟ್ಟಾಗಿ ಉಳಿದಿಲ್ಲ.
ರಾಷ್ಟ್ರೀಯ ಸ್ವಯಂಸೇವಕ ಸಂಘ ರೂಪಿತ ಕಾರ್ಯಯೋಜನೆ, ಆಣತಿಯನ್ನು ಮೀರದೆ ಕಟ್ಟಾ ಅನುಯಾಯಿಯಾಗಿ ಕಂಡವರಲ್ಲಿ ಸಿ.ಟಿ.ರವಿಯೂ ಓರ್ವರು. ಸಂತೋಷ್ಜಿ ಬಣದಲ್ಲಿ ಮೂಲ ಆರೆಸ್ಸೆಸ್ಸಿಗರಿಗೆ ಮಾತ್ರವೇ ಮನ್ನಣೆ. ಹೀಗಾಗಿ, ಇತರೆ ಹೋರಾಟಗಳಲ್ಲಿ ಗುರುತಿಸಿಕೊಂಡು ಬೆಳೆದ ಯಡಿಯೂರಪ್ಪರಂತಹ ನಾಯಕರ ಶ್ರಮ ಇಲ್ಲಿ ನಗಣ್ಯ.
ಇಂತಹ ಬೆಳವಣಿಗೆಯಿಂದಾಗಿಯೇ ಸಿಎಂ ಬದಲಾವಣೆ ವಿಷಯ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸಿ.ಟಿ.ರವಿಯವರಲ್ಲಿ ಈ ವಿಷಯ ಪ್ರಶ್ನೆ ಮಾಡುವಾಗ, “ಸಧ್ಯ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಭವಿಷ್ಯದ ಬಗ್ಗೆ ನಾನೇನೂ ಹೇಳಲ್ಲ” ಎನ್ನುತ್ತಿದ್ದಾರೆ. ಈ ಮಾತಿನ ಹಿಂದೆ ನಾಯಕತ್ವ ಬದಲಾವಣೆಯ ಇಂಗಿತ ಕಾಣಿಸಿದೆ. ಹಾಗೆಯೇ ಯಡಿಯೂರಪ್ಪರ ಜತೆಗೆ ಅವರ ಬೆಂಬಲಿಗ ಶಾಸಕರಿಗೂ ಶಾಕ್ ಕೊಡುವ ಯತ್ನ ನಡೆದಿದೆ.
ಹಿಂದೆ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಸಂದರ್ಭದಲ್ಲೇ ಬಿಜೆಪಿಯೊಳಗಿನ ಬೇಗುದಿಯನ್ನು ರಾಜ್ಯದ ಜನ ಗಮನಿಸಿದ್ದಾರೆ. ಈಗ ‘ಯಡಿಯೂರಪ್ಪ ಬಿಜೆಪಿಗೆ ಆಮ್ಲಜನಕ’ ಎಂದು ಮಠಾಧೀಶರು ಹೇಳಿರುವುದರಲ್ಲಿ ತಪ್ಪೇನಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಾಗ ಯಡಿಯೂರಪ್ಪರಿಗೆ ಸಂಘಪರಿವಾರದ ಬೆಂಬಲವಿತ್ತಾದರೂ, ಅದರ ಹೊರತಾದ ಬೆಂಬಲಿಗರ ಸಂಖ್ಯೆ ದೊಡ್ಡಮಟ್ಟದಲ್ಲಿತ್ತು.