ರಾಜಕೀಯ

ಉತ್ತರ ಕನ್ನಡ: ದೇಶಪಾಂಡೆ ಏಕಚಕ್ರಾಧಿಪಥ್ಯ; ಅವನತಿಯತ್ತ ಕಾಂಗ್ರೆಸ್ ಪಕ್ಷ

ತೇಜಸ್ವಿ

ಕಾರವಾರ : ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಮಲೆನಾಡು,ಬಯಲು ಸೀಮೆ ಮತ್ತು ಕರಾವಳಿ ತಾಲೂಕುಗಳನ್ನೊಳಗೊಂಡ ಜಿಲ್ಲೆ. ಕೃಷಿ, ಪಶುಪಾಲನೆ, ಮೀನುಗಾರಿಕೆ ಇಲ್ಲಿಯ ಜನರ ಪ್ರಮುಖ ಉದ್ಯೋಗವಾಗಿದೆ.ಜಿಲ್ಲೆಯ ರಾಜಕಾರಣದಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರವೂ ಒಳಗೊಂಡಿದೆ.

ಜಿಲ್ಲೆಯ ರಾಜಕಾರಣದಲ್ಲಿ ದಿವಂಗತ ರಾಮಕೃಷ್ಣ ಹೆಗಡೆಯವರದು ಅತೀ ದೊಡ್ಡ ಹೆಸರು. ಜನತಾ ಪಕ್ಷದ ಕಾಂಗ್ರೆಸ್ಸೇತರ ಸರಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದು ಆರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಜನಮನ್ನಣೆಗೆ ಪಾತ್ರರಾದವರು ರಾಮಕೃಷ್ಣ ಹೆಗಡೆ. ಕುಟುಂಬ ರಾಜಕಾರಣದಿಂದ ಅನತಿ ದೂರದಲ್ಲಿದ್ದ ಹೆಗಡೆ ಅವರ ಕಣ್ಣಿಗೆ ಬಿದ್ದವರೇ ದೇಶಪಾಂಡೆ ಸಾಹೇಬರು.

ದೇಶಪಾಂಡೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ (ಜಿ.ಎಸ್.ಬಿ) ಸೇರಿದವರು. ಜನತಾಪಕ್ಷ, ಜನತಾದಳ, ಕಾಂಗ್ರೆಸ್ ಸರಕಾರದಲ್ಲಿ ಬ್ರಾಹ್ಮಣ ಕೋಟಾದಡಿಯಲ್ಲಿ ಮಂತ್ರಿಯಾಗಿ ಅಧಿಕಾರ ಅನುಭವಿಸಿದವರು.

ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಬೆಳೆದ ದೇಶಪಾಂಡೆಗೆ ಹೆಗಡೆ ಅವರ ಚರಿಷ್ಮಾ ಇಲ್ಲದಿರುವುದೇ ದೊಡ್ಡ ದುರಂತ. ಹೆಗಡೆ ಅವರು ಮೌಲ್ಯಾಧಾರಿತ ರಾಜಕಾರಣಕ್ಕೆ ಜೋತುಬಿದ್ದು ಜಾತ್ಯತೀತರಾಗಿದ್ದರೆ, ಇದಕ್ಕೆ ತದ್ವಿರುದ್ಧ ಈ ಆರ್.ವಿ. ದೇಶಪಾಂಡೆ.

ಉತ್ತರ ಕನ್ನಡ ಜಿಲ್ಲೆಯ ದೈತ್ಯ ರಾಜಕಾರಣಿ ಎಂದು ಹೆಸರಾದ ಆರ್.ವಿ.ದೇಶಪಾಂಡೆ ಜಿಲ್ಲೆಗಂಟಿದ ಶಾಪ ಎಂದರೂ ತಪ್ಪಾಗಲಿಕ್ಕಿಲ್ಲ. ಜಿಲ್ಲೆಯ ರಾಜಕಾರಣದಲ್ಲಿ ದೀರ್ಘ ಕಾಲ ಮಂತ್ರಿಯಾಗಿ ಸೇವೆ ಸಲ್ಲಿಸಿದವರು ಯಾರಾದರೂ ಇದ್ದರೆ ಅವರು ದೇಶಪಾಂಡೆ ಮಾತ್ರ.

25 ವರ್ಷಗಳ ಕಾಲ ಮಂತ್ರಿಯಾಗಿದ್ದ ದೇಶಪಾಂಡೆ ಅವರು 10 ವರ್ಷಗಳ ಕಾಲ ಜಿಲ್ಲೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಕೆಲಸ ಮಾಡಿದವರು. ಆದ್ರೆ ಜಿಲ್ಲೆಯಲ್ಲಿ ಒಂದೇ ಒಂದು ಕೈಗಾರಿಕೆಯನ್ನು ತರಲು ಪ್ರಯತ್ನಿಸಲಿಲ್ಲ. ಜಿಲ್ಲೆಯಲ್ಲಿ ಕಿತ್ತು ತಿನ್ನುವ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಕಿಂಚಿತ್ತೂ ಪ್ರಯತ್ನಿಸಲಿಲ್ಲವೆಂಬ ಆರೋಪ ದೇಶಪಾಂಡೆ ಅವರ ಮೇಲಿದೆ.

ಜಿಲ್ಲೆಯಲ್ಲಿ ಒಂದರ ನಂತರ ಒಂದರಂತೆ ಹರಿದು ಬಂದ ಯೋಜನೆಗಳಿಂದ ಜನರ ಬದುಕು ತತ್ತರಿಸಿ ಹೋಗಿದೆ. ಶರಾವತಿ ಟೇಲರೇಸ್, ಬೇಡ್ತಿ, ಕೈಗಾ ಅಣು ವಿದ್ಯುತ್ ಸ್ಥಾವರದಂತಹ ಹಲವು ಯೋಜನೆಗಳಿಂದ ಜನರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡರು. ಇದರಿಂದಾಗಿ ಜನರ ಬದುಕು ದುಸ್ತರವಾಯಿತು. ಈ ಎಲ್ಲ ಯೋಜನೆಗಳಿಂದ ಸುಧಾರಿಸಿಕೊಳ್ಳುವಷ್ಟರಲ್ಲಿ ಸೀಬರ್ಡ್ ನೌಕಾನೆಲೆ, ಕೊಂಕಣ ರೈಲ್ವೆ ಯೋಜನೆಗಳಿಂದ ಜನರ ಬದುಕು ಹೈರಾಣಾಗಿ ಹೋಯಿತು. ಜಿಲ್ಲೆಯ ಅಭಿವೃದ್ಧಿಯ ಹೆಸರಿನಲ್ಲಿ ತುಂಡು ಭೂಮಿಯನ್ನು ಜನರಿಂದ ಕಸಿದುಕೊಂಡು ಸರ್ಕಾರ ಘೋಷಿಸಿದ ಪರಿಹಾರವನ್ನು ತ್ವರಿತಗತಿಯಲ್ಲಿ ವಿತರಿಸದೇ ಅನ್ಯಾಯ ಮಾಡಿತು. ದೇಶಪಾಂಡೆ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ನಿರಾಶ್ರಿತರ ನೆರವಿಗೆ ಬಾರದೇ ಅನ್ಯಾಯ ಮಾಡಿದರು.

ತಮ್ಮ ಸ್ವಕ್ಷೇತ್ರ ಹಳಿಯಾಳದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಗಾರರಿದ್ದರೂ ಒಂದೇ ಒಂದು ಸಕ್ಕರೆ ಕಾರ್ಖಾನೆ ತರಲು ಇವರಿಂದ ಸಾಧ್ಯವಾಗಿಲ್ಲ.ಕೇತ್ರದಲ್ಲಿ ಬಲಿಷ್ಠವಾಗಿದ್ದ ರೈತಸಂಘಟನೆಯನ್ನು ಒಡೆದು ಹಾಕಿ ಅಲ್ಲಿರುವ ರೈತಸಂಘದ ನಾಯಕರನ್ನು ಅಂದಿನ ಜನತಾದಳಕ್ಕೆ ಸೇರಿಸಿಕೊಂಡ ಕೀರ್ತಿ ದೇಶಪಾಂಡೆ ಅವರಿಗೆ ಸಲ್ಲಬೇಕು.

ಪಕ್ಷಾಂತರ ಮಾಡಿದಾಗಲೆಲ್ಲ ದೇಶಪಾಂಡೆ ಪಕ್ಷದ ಟಿಕೇಟ್ ಮತ್ತು ಸಚಿವ ಸ್ಥಾನ ಖಾತ್ರಿಪಡಿಸಿಕೊಂಡೇ ಹೆಜ್ಜೆ ಇಡುತ್ತಾರೆಂದು ಅವರ ಆಪ್ತರೇ ಹೇಳಿಕೊಳ್ಳುತ್ತಾರೆ. ದೇಶಪಾಂಡೆ ಅವರಿಗೆ ಜಿಲ್ಲೆಯ ಬಹುಸಂಖ್ಯಾತ ಸಮಾಜವಾದ ಬ್ರಾಹ್ಮಣ, ನಾಮಧಾರಿ ಮತ್ತು ಹಾಲಕ್ಕಿ ಒಕ್ಕಲಿಗ ಸಮಾಜದವರನ್ನು ಕಂಡರಾಗದು. ಈ ಸಮಾಜದ ಒಬ್ಬೇ ಒಬ್ಬ ನಾಯಕನನ್ನು ಬೆಳೆಯಗೊಡಲಿಲ್ಲವೆಂಬ ಆರೋಪ ದೇಶಪಾಂಡೆಯವರ ಮೇಲಿದೆ. ತಾವು ಅಧಿಕಾರದಲ್ಲಿದ್ದಷ್ಟು ದಿನವೂ ಸ್ವಜಾತಿ ಪ್ರೇಮ ಮೆರೆದ ದೇಶಪಾಂಡೆ ವಿ.ಡಿ.ಹೆಗಡೆ ಅವರನ್ನು ( ಮಾಜಿ ಶಾಸಕ ಸುನೀಲ್ ಹೆಗಡೆ ಅವರ ತಂದೆ ) ವಿಧಾನ ಪರಿಷತ್ ಸದಸ್ಯರನ್ನಾಗಿಸಿದರೆ, ಜಿಲ್ಲಾ ಪಂಚಾಯತಿಗೆ ಮೊದಲ ಬಾರಿ ಆಯ್ಕೆಗೊಂಡ ಕುಮಟಾದ ದಿವಂಗತ ಎಲ್.ವಿ.ಶಾನಭಾಗ ಅವರನ್ನು ಅಧ್ಯಕ್ಷರನ್ನಾಗಿಸಿದ್ದರು. ಇದರ ಹೊರತಾಗಿ ಸುಧೀರ ಪಂಡಿತ, ಧೀರೂ ಶಾನಭಾಗ, ಕಾಂತಪ್ಪ ಶಾನಭಾಗರಂತಹ ಅನೇಕ ಸ್ವಜಾತಿ ಬಾಂಧವ ಗುತ್ತಿಗೆದಾರರಿಗೆ ನೀರೆರೆದು ಪೋಷಿಸಿದ್ದಾರೆ.

ಇನ್ನು ದೇಶಪಾಂಡೆ ಸಚಿವರಾದಾಗ ಸಮುದ್ರದ ಮೀನಿನಂತೆ ಈಜಾಡುತ್ತಾರೆ. ಅಧಿಕಾರ ಕಳಕೊಂಡಾಗ ಮಂಕಾಗಿ ಬಿಡುತ್ತಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾಗಿರುವ ದೇಶಪಾಂಡೆ ಆಡಳಿತಾರೂಢ ಬಿಜೆಪಿಯೊಂದಿಗೆ ಮೃದು ಧೋರಣೆ ಹೊಂದಿದಂತೆ ಕಂಡುಬರುತ್ತಿದೆ. ತಮ್ಮ ಬಳಿ ಇರುವ ಕಪ್ಪು ಹಣವನ್ನು ರಕ್ಷಿಸಿಕೊಳ್ಳಲು ದೇಶಪಾಂಡೆ ಬಿಜೆಪಿ ಸಖ್ಯ ಹೊಂದಿದ್ದಾರೆಂದು ಹೇಳಲಾಗುತ್ತಿದೆ.
ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಪಟ್ಟನ್ನು ರೂಢಿಸಿಕೊಂಡಿರುವ ದೇಶಪಾಂಡೆ ಎದುರಾಳಿ ಅಭ್ಯರ್ಥಿಗೆ ಬೇಕಷ್ಟು ಹಣ, ಹೆಂಡ ಸರಬರಾಜು ಮಾಡಿ ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುತ್ತಾರೆ ಎಂಬ ಆರೋಪವಿದೆ.

ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿವರಾಮ್ ಹೆಬ್ಬಾರ್ ಅವರಿಗೆ ಮಂತ್ರಿಯಾಗಲು ದೇಶಪಾಂಡೆ ಅವಕಾಶ ನೀಡಿದ್ದರೆ ಹೆಬ್ಬಾರ್ ಅವರು ಪಕ್ಷ ಬಿಡುವ ಸಂದರ್ಭವೇ ಬರುತ್ತಿರಲಿಲ್ಲ. ದೇಶಪಾಂಡೆ ಅವರ ಏಕಚಕ್ರಾಧಿಪಥ್ಯದಿಂದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅವನತಿಯ ಹಾದಿ ಹಿಡಿದಿದೆ ಎಂದರೆ ಅದು ತಪ್ಪಾಗಲಿಕ್ಕಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button