ಹೈಕಮಾಂಡ್ ಎಚ್ಚರಿಕೆಗೂ ಮಣಿಯದ ಸಿದ್ದರಾಮಯ್ಯ ಬಣ; ಸಿದ್ದು ಪರೋಕ್ಷ ಸಮರ್ಥನೆ

ಬೆಂಗಳೂರು: ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಕೂಡದು ಎಂದು ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದ ಬಳಿಕವೂ ಸಿದ್ದರಾಮಯ್ಯ ಬಣದ ಶಾಸಕರು ಸುಮ್ಮನಾಗಿಲ್ಲ.
ಸಿದ್ದರಾಮಯ್ಯ ಪರವಾಗಿ ಶಾಸಕರು ಮಾತನಾಡುತ್ತಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೈಕಮಾಂಡ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ಎಲ್ಲ ಶಾಸಕರಿಗೂ ಎಚ್ಚರಿಕೆ ನೀಡಿದ್ದರು. ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡದಿರುವಂತೆ ಎಚ್ಚರಿಸಿದ್ದರು.
ಇಷ್ಟಾದ ಮೇಲೂ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ತಮ್ಮ ವರಸೆ ಮುಂದುವರಿಸಿದ್ದಾರೆ. ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಮತ್ತು ರಾಮಪ್ಪ ಸಿದ್ದರಾಮಯ್ಯ ಪರವಾಗಿ ನಿಂತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಕೂಡ ಶಾಸಕರು ತಮ್ಮ ಪರವಾಗಿ ಮಾತನಾಡುತ್ತಿದ್ದರೆ ಅದು ಅವರ ಅಭಿಪ್ರಾಯ. ಅದನ್ನು ನಾನು ತಡೆಯಲಾರೆ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ತಮ್ಮ ಪರ ಶಾಸಕರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದರೊಂದಿಗೆ, ಕಾಂಗ್ರೆಸ್ನೊಳಗೆ ಎದ್ದಿರುವ ಮುಖ್ಯಮಂತ್ರಿ ಹುದ್ದೆ ಫೈಟ್ ಇನ್ನೂ ಕಾವೇರಿಸಿಕೊಂಡಿರುವುದು ನಿಚ್ಚಳವಾಗಿದೆ.