
ನವದೆಹಲಿ: ಚಂಡಮಾರುತದಿಂದ ಹಾನಿಗೊಳಗಾಗಿರುವ ಪಶ್ಚಿಮ ಬಂಗಾಳದ ಪ್ರದೇಶಗಳ ಪರಿಸ್ಥಿತಿ ಪರಿಶೀಲಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 30 ನಿಮಿಷಗಳ ಕಾಲ ಕಾಯಿಸಿದರೆಂಬುದು ವಿವಾದ ಹುಟ್ಟುಹಾಕಿದೆ.
ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧಾಂಕರ್ ಅವರನ್ನು ಅರ್ಧ ಗಂಟೆಗಳ ಕಾಲ ಕಾಯಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡುಮಾರುತದಿಂದ ಆದ ಹಾನಿ ಕುರಿತು ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ಮೋದಿ ಬಂಗಾಳದ ಕಲಾಯಿಕುಂಡ್ ವಾಯುನೆಲೆಗೆ ಬಂದಾಗ, ಮಮತಾ ಬ್ಯಾನರ್ಜಿ ಕಾಯಿಸಿರುವುದಾಗಿ ಹೇಳಲಾಗಿದೆ.
ಯಾಸ್ ಚಂಡಮಾರುತದ ಪರಿಣಾಮದಿಂದಾದ ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಇಂದಿನ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾದರು. ಬದಲಿಗೆ ವಾಯುನೆಲೆಯಲ್ಲಿ ಪ್ರಧಾನಿಯೊಂದಿಗೆ ತರಾತುರಿಯಲ್ಲಿ 15 ನಿಮಿಷ ಸಂವಾದ ನಡೆಸಿದರು. ಪ್ರಧಾನಿಯೊಂದಿಗಿನ ಚಂಡಮಾರುತ ಹಾನಿ ಪರಾಮರ್ಶನಾ ಸಭೆಯಲ್ಲಿ ಮಮತಾ ಪಾಲ್ಗೊಳ್ಳಬೇಕಿತ್ತು. ಆದರೆ, ವರದಿ ಕೊಟ್ಟ ಬಳಿಕ ಅವರು ಹೊರಟುಬಿಟ್ಟರು ಎಂಬುದು ವರದಿ.
ಆದರೆ ಮತ್ತೊಂದು ವರದಿಯ ಪ್ರಕಾರ, ಮಮತಾ ಬ್ಯಾನರ್ಜಿ ತಮ್ಮ ಸಭೆಯ ಬಗ್ಗೆ ಕೇಂದ್ರಕ್ಕೆ ತಿಳಿಸಿದ್ದರು. ಆದರೆ, ಅವರನ್ನು ವಾಯುನೆಲೆಯಲ್ಲಿ ಪ್ರಧಾನಿಯವರಿಗಾಗಿ ಕಾಯುವಂತೆ ಮಾಡಲಾಗಿತ್ತು. ಇದು ಅವರನ್ನು ಕುಪಿತರನ್ನಾಗಿಸಿತು. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿಯ ಹೇಳಿಕೆ.
ಈ ವಿವಾದದ ಬಳಿಕ ಪ್ರತಿಕ್ರಿಸಿರುವ ಮಮತಾ ಬ್ಯಾನರ್ಜಿ, ನನ್ನನ್ನು ಈ ರೀತಿ ಅವಮಾನಿಸಬೇಡಿ ಎಂದು ಪ್ರಧಾನಿಗೆ ಹೇಳಿದ್ದಾರೆ. ಸುಳ್ಳುಸುದ್ದಿ ಹಬ್ಬಿಸುವುದು ಬೇಡ. ಎಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ನಮಗೆ ಭರ್ಜರಿ ಗೆಲುವು ಸಿಕ್ಕಿದೆ. ಅದಕ್ಕಾಗಿಯೇ ನೀವು ಈ ರೀತಿ ವರ್ತಿಸುತ್ತಿದ್ದೀರಿ. ನೀವು ಎಲ್ಲವನ್ನೂ ಮಾಡಿ ನೋಡಿದಿರಿ, ಆದರೆ ಸೋತಿದ್ದೀರಿ. ಪ್ರತಿದಿನ ನಮ್ಮೊಂದಿಗೆ ಯಾಕೆ ಜಗಳವಾಡುತ್ತಿದ್ದೀರಿ ಎಂದು ಮಮತಾ ಪ್ರಶ್ನಿಸಿದ್ದಾರೆ.