
ಬಿಜೆಪಿ ಬಿಕ್ಕಟ್ಟು
———————————————————
ವರದಿ: ಮಲ್ಲಿಕ್ ಬೆಳಗಲಿ
ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಟ್ವಿಸ್ಟ್. ಮುಖ್ಯಮಂತ್ರಿಯನ್ನು ಬದಲಿಸಬೇಕೆನ್ನುವವರ ಕಸರತ್ತು. ಈ ಮದ್ಯೆ ಬಿಜೆಪಿ ಪಕ್ಷ ಅಧಿಕಾರ ಗದ್ದುಗೆ ಏರಲು ಪ್ರಮುಖ ಕಾರಣವಾಗಿದ್ದ ಪವರ್ ಫುಲ್ ನಾಯಕ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಸದ್ಯ ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರ ಕುತೂಹಲ.
ಮಂತ್ರಿ ಪದವಿ ಕಳೆದುಕೊಂಡ ನಂತರ ಗೋಕಾಕ್ ಶಾಸಕರಾಗಿ ಮಾತ್ರ ಉಳಿದುಕೊಂಡಿರುವ ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಭವಿಷ್ಯದ ಚಿಂತೆಯಲ್ಲಿ ಮುಳುಗಿದ್ದಾರೆ. ಅವರಿಗೀಗ ಪ್ರಮುಖವಾಗಿರುವುದು ಸಿಡಿ ಪ್ರಕರಣದಿಂದ ಹೊರಬರುವುದು. ಅದರ ನಡುವೆಯೇ ಪವರ್ ಫುಲ್ ಮಂತ್ರಿ ಸ್ಥಾನ, ಜಿಲ್ಲೆಯಯಲ್ಲಿ ಮತ್ತದೇ ಸ್ಥಾನಮಾನ ಪಡೆದುಕೊಳ್ಳಲೇಬೇಕು ಎಂಬ ಆಲೋಚನೆಯೂ ಅವರಿಗಿದ್ದೇ ಇರುತ್ತದೆ.
ಸ್ವಕ್ಷೇತ್ರದಲ್ಲಿ ಸದ್ಯ ಫುಲ್ ಆ್ಯಕ್ಟಿವ್
ಸಿಡಿ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡ ನಂತರ ರಮೇಶ್ ಜಾರಕಿಹೊಳಿ ಮುಖ ಎಲ್ಲಿಯೂ ಕಾಣಿಸಲೇ ಇಲ್ಲ. ಕೊಂಚ ರಿಲೀಫ್ ಸಿಕ್ಕ ನಂತರ ಈಗ ಕ್ಷೇತ್ರದ ತುಂಬೆಲ್ಲಾ ಓಡಾಡುತ್ತಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಕೊರೊನಾ ವಾರಿಯರ್ಸ್ ಹಾಗೂ ಬಡ ಜನರಿಗೆ ಮಾಸ್ಕ್, ರೇಷನ್ ಕಿಟ್ ಹಂಚಿದ್ದಾರೆ. ಅಲ್ಲದೆ ಮುಖ್ಯವಾಗಿ ಅತಿವೃಷ್ಟಿಯಿಂದ ಗೋಕಾಕ್ ಕ್ಷೇತ್ರಕ್ಕೆ ಆಪತ್ತು ಬರದಂತೆ ತಡೆಯುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಮ್ಮ ಬೆಂಬಲಿಗರು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿ ಇರುವ ರಮೇಶ್ ಜಾರಕಿಹೊಳಿ ಬೆಂಗಳೂರು ಮತ್ತು ಬೆಳಗಾವಿ ದಾರಿಯನ್ನು ಮರೆತು ಇಷ್ಟು ದಿನಗಳ ಕಾಲ ಇದ್ದಿದ್ದು ಇತ್ತೀಚಿಗೆ ಇದೇ ಮೊದಲು ಎನ್ನಬಹುದು.
ಲೋಕಸಭೆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ ಅಂತ ಪಕ್ಷದ ನಾಯಕರು ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡಿದ್ದರು. ಅದೆಲ್ಲದರ ಮದ್ಯೆ ಗೆಲುವಿನ ನಗೆಯನ್ನು ಬಿಜೆಪಿ ಬೀರಿತು. ಇನ್ನು ಕಳೆದ ವಾರ ಖುದ್ದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರಗತಿ ಪರಿಶೀಲನಾ ಸಭೆಗೆ ಬೆಳಗಾವಿಗೆ ಆಗಮಿಸಿದ್ದರು. ಆದ್ರೆ ಅಲ್ಲಿ ಸಾಹುಕಾರ ಅಂತರ ಕಾಯ್ದುಕೊಂಡಿದ್ದರು.
ಮಂತ್ರಿಗಳಾದ ಬಿ.ಸಿ ಪಾಟೀಲ್, ಕೆ ಎಸ್ ಈಶ್ವರಪ್ಪ ಹೀಗೆ ಯಾರೇ ಬಂದರೂ ರಮೇಶ್ ಜಾರಕಿಹೊಳಿ ಅವರ ಬಳಿ ಹೋಗಿಲ್ಲ. ಆದ್ರೆ ತಮ್ಮ ಇರುವಿಕೆಯನ್ನು ಮಾತ್ರ ಸಭೆ ಸಭಾರಂಭ ಮಾಡುವ ಮೂಲಕ ತೋರಿಸಿಕೊಂಡಿದ್ದಾರೆ.
ಸಾಹುಕಾರ ಜಾಣ ನಡೆ
ಅವರು ಯಡಿಯೂರಪ್ಪ ಪರವೇ ಇಲ್ಲ ವಿರೋಧವೇ ಅಥವಾ ಮೂರನೇ ಗುಂಪಿನ ನಾಯಕನಾ..? ಇಂಥದೊಂದು ಅನುಮಾನ ಬರುವ ಹಾಗೆಯೇ ಅವರ ನಡೆಯಿದೆ.
ಎರಡು ದಿನದ ಹಿಂದೆ ಸಚಿವ ಈಶ್ವರಪ್ಪ ಬೆಳಗಾವಿಗೆ ಆಗಮಿಸಿದಾಗ ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಜೊತೆಗೇ, ಸಿಎಂ ಯಡಿಯೂರಪ್ಪ ಅವರೇ ನಮ್ಮ ನಾಯಕರು ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಅಲ್ಲದೆ ಅದೇ ದಿನ ಅವರ ಬೆಂಬಲಿಗರು ಒಂಟೆ ಮೂಲಕ ಪ್ರತಿಭಟನೆ ನಡೆಸಿ ಮತ್ತೆ ಮಂತ್ರಿ ಪದವಿಯ ದ್ವನಿ ಎತ್ತಿದ್ದಾರೆ. ಅಂದರೆ ಸಿಡಿ ಕೇಸ್ ಸದ್ಯ ರಮೇಶ್ ಜಾರಕಿಹೊಳಿ ಲೆಕ್ಕದಲ್ಲಿ ಈಗಾಗಲೇ ಒಂದು ಹಂತಕ್ಕೆ ತಲುಪಿರುವಂತೆ ಕಾಣಿಸುತ್ತಿದೆ.
ಸಮ್ಮಿಶ್ರ ಸರ್ಕಾರಕ್ಕೆ ಮುಹೂರ್ತ ಇಟ್ಟು ಮುಂಚೂಣಿಯಲ್ಲಿದ್ದ ಸಾಹುಕಾರ ಸ್ನೇಹಿತ ಸಿ ಪಿ ಯೋಗೀಶ್ವರ್ ಈಗ ಮತ್ತೆ ಸಿಎಂ ಯಡಿಯೂರಪ್ಪ ಬದಲಾವಣೆಯ ಕಾರ್ಯದಲ್ಲಿಯೇ ದೆಹಲಿ ಚಲೋ ಪ್ರೋಗ್ರಾಮ್ ಸಕ್ಸಸ್ ಮಾಡಿಕೊಂಡು ಈಗ ಉಸ್ತುವಾರಿ ಅರುಣ್ ಸಿಂಗ್ ಮುಂದೆಯೂ ತಮ್ಮ ದಾಳ ಉರುಳಿಸಿದ್ದಾರೆ. ಇನ್ನೊಂದು ಕಡೆ ಹಳ್ಳಿ ಹಕ್ಕಿ ನೇರವಾಗಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಇವರೆಲ್ಲರೂ ಕೂಡ ಸಮ್ಮಿಶ್ರ ಸರ್ಕಾರ ಕೆಡವಲು ಇದೇ ರೀತಿಯ ಬೇರೆ ಬೇರೆ ಮಾರ್ಗ ಅನುಸರಿಸಿದ್ದರು. ಸದ್ಯ ಸಂಕಷ್ಟದಲ್ಲಿರುವ ರಮೇಶ್ ಜಾರಕಿಹೊಳಿ ಅನಿವಾರ್ಯ ಕಾರಣದಿಂದ ಸುಮ್ಮನಿದ್ದಾರೆ ಅನಿಸುತ್ತದೆ.
ಸದ್ಯ ನಾಯಕತ್ವ ಬದಲಾವಣೆ ಕೂಗಿನಲ್ಲೇ ಮಂತ್ರಿ ಮಂಡಲ ಪುನರ್ ರಚನೆ ಮಾತು ಕೂಡ ಕೇಳಿ ಬರುತ್ತಿದೆ. ರಮೇಶ್ ಜಾರಕಿಹೊಳಿ ಮತ್ತೆ ಸಚಿವರಾಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಒಂದು ಕಡೆ ಮಿತ್ರ ಮಂಡಳಿ ಇನ್ನೊಂದು ಕಡೆ ಬಾಲಚಂದ್ರ ಜಾರಕಿಹೊಳಿಯ ಲಾಬಿ ಕೂಡ ಜೋರಾಗಿದೆ.
ರಮೇಶ್ ಜಾರಕಿಹೊಳಿ ಸದ್ಯ ಯಾವುದನ್ನೂ ಸ್ಪಷ್ಟವಾಗಿ ಮಾತನಾಡದೆ ಮಿತ್ರ ಮಂಡಳಿಯ ಬೆಂಬಲದಿಂದ ಮತ್ತೆ ಪುಟಿದೆಳೆವ ಭರವಸೆಯಲ್ಲಿ ಕ್ಷೇತ್ರದ ಜನರ ಮಧ್ಯೆ ಈಗ ಆಕ್ಟಿವ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮದ್ಯೆ ಆಗಾಗ ಮಂತ್ರಿ ಪದವಿಗೆ ಬೆಂಬಲಿಗರ ಪ್ರತಿಭಟನೆ ಕೂಡ ನಡೆಯುತ್ತಿದೆ. ಸಾಹುಕಾರ್ ನಡೆ ಮುಂದೇನು ಎನ್ನುವ ಕುತೂಹಲ ಇನ್ನೂ ಕೊಂಚ ದಿನ ಹೀಗೆಯೇ ಉಳಿಯಲಿದೆ.