
ವರದಿ: ಕಿರುಗುಂದ ರಫೀಕ್
ರಾಜ್ಯದಲ್ಲಿ ಸ್ವಾಮೀಜಿಗಳು ಸಮಾನತೆ ಸಾರುವುದನ್ನು ಮರೆತು ಏಕಮುಖ ಧೋರಣೆ ಅನುಸರಿಸುತ್ತಿರುವ ಬಗ್ಗೆ ನಾಡಿನ ಅನೇಕ ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ ಸಹ “ಹೋಗ್ರಿ ನಿಮಗೆ ಇವ್ಯಾವುದೂ ತಿಳಿಯಲ್ಲ..” ಎನ್ನುತ್ತಾ ಬಿರುಸಿನ ಹೆಜ್ಜೆಯಿಟ್ಟಿರುವ ಅನೇಕ ಸ್ವಾಮೀಜಿಗಳು ಮತ್ತೊಂದಿಷ್ಟು ಮುಂದಡಿ ಇಟ್ಟು ಯಡಿಯೂರಪ್ಪ ಪರ ಏರುಧ್ವನಿ ಮೊಳಗಿಸಿದ್ದಾರೆ.
“ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಬೇಕು. ನಾಯಕತ್ವ ಬದಲಾವಣೆ ಮಾಡಬೇಡಿ. ಬಿಎಸ್ ವೈ ಬಿಜೆಪಿಗೆ ಆಮ್ಲಜನಕವಿದ್ದಂತೆ., ಯಡಿಯೂರಪ್ಪ ಇಲ್ಲದೆ ಬಿಜೆಪಿ ವೆಂಟಿಲೇಟರ್ ನಲ್ಲಿ ಇರಬೇಕಾಗುತ್ತದೆ! ಹಾಗೆಂದು ವೀರಶೈವ ಮಠಾಧೀಶರ ಧರ್ಮ ಪರಿಷತ್ತಿನ ಸ್ವಾಮೀಜಿಗಳು, ಭಾರತೀಯ ಜನತಾ ಪಕ್ಷಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
“ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಹೀಗಾಗಿ ಅವರು ಅಧಿಕಾರ ಬಿಡಬೇಕು” ಎಂದು ಹೇಳುತ್ತಿರುವುದು ಸರಿಯಲ್ಲ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಸುವಾಗ ಅವರ ಹಲ್ಲು ಬಿದ್ದು, ಬೆನ್ನು ಬಾಗಿರುವುದು ಗೊತ್ತಿರಲಿಲ್ಲವೇ? ಎಂದು ಬಿಜೆಪಿ ನಾಯಕರ ವಿರುದ್ಧ ಸ್ವಾಮೀಜಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿವಿಧ ಮಠಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ, ವಾಮದೇವ ಮಹಾಂತ ಶಿವಾಚಾರ್ಯ, ಕಲ್ಯಾಣಸ್ವಾಮಿ, ಅಭಿನವ ಹಾಲಸ್ವಾಮಿ, ಮರಿಸಿದ್ದ ಬಸವಸ್ವಾಮಿ ಸಹಿತ 15ಕ್ಕೂ ಹೆಚ್ಚು ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇನ್ನು ಬಿಜೆಪಿಯೊಳಗೆ ತಳಮಳ ಹೇಗಿರಲಿದೆ, ವೆಂಟಿಲೇಟರ್ ಬಿಟ್ಟು ಉಸಿರಾಟ ನಡೆಸಲು ಪಕ್ಷಕ್ಕೆ ಸಾಧ್ಯವಿದೆಯೇ ಎಂಬುದನ್ನು ಕಾದು ನೋಡಬೇಕಿದೆ.