
ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸುತ್ತಲೇ ಇವೆ. ಅದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಒಂದೆಡೆ ಸಿ ಟಿ ಹೇಳಿರುವ ವಿಜಯನಗರ ಸಾಮ್ರಾಜ್ಯದ ಕಥೆಯಾದರೆ, ಇನ್ನೊಂದೆಡೆ ಸಿ ಪಿ ಯೋಗೀಶ್ವರ್ ಆದಿಚುಂಚನಗಿರಿ ಮಠಕ್ಕೆ ಭೇಟಿ ಕೊಟ್ಟಿರುವುದು.
ನಿನ್ನೆಯಷ್ಟೇ ಬಿ ವೈ ವಿಜಯೇಂದ್ರ ತಮ್ಮ ಬೆಂಬಲಿಗರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿದ್ದರು. ಅದರ ಬೆನ್ನಲ್ಲೇ ಇಂದು ಸಿ ಪಿ ಯೋಗೀಶ್ವರ್ ರಾಮನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ನಿರ್ಮಲಾನಂದಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ, ತಮ್ಮ ವಿರುದ್ಧ ಸಹಿ ಸಂಗ್ರಹ ನಡೆಯುತ್ತಿದೆ ಎಂಬ ವದಂತಿಗೂ ಪ್ರತಿಕ್ರಿಯಿಸಿದ್ದಾರೆ. ಕೆಲ ಶಾಸಕರು, ಸಚಿವರು ನನ್ನ ವಿರುದ್ಧ ಸಹಿ ಸಂಗ್ರಹಿಸುತ್ತಿರುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ತೀರ್ಮಾನವೇನಿದ್ದರೂ ಹೈಕಮಾಂಡ್ನದು ಎಂದಿದ್ದಾರೆ.
ಇನ್ನೊದೆಡೆ ಸಿ ಟಿ ರವಿ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ರಾಮರಾಯನ ಕಥೆ ಯಾವ ವಿಚಾರವನ್ನು ಬೊಟ್ಟು ಮಾಡುತ್ತಿದೆ ಎಂಬುದು ಚರ್ಚೆಗೆ ಕಾರಣವಾಗಿದೆ.
ತನ್ನ ಸುತ್ತ ಭಟ್ಟಂಗಿಗಳನ್ನು ಇಟ್ಟುಕೊಂಡ ರಾಮರಾಯನಿಂದಾಗಿ ವಿಜಯನಗರ ಸಾಮ್ರಾಜ್ಯ ಪತನವಾದ ಕಥೆಯನ್ನು ಅವರು ಬರೆದುಕೊಂಡಿದ್ದು, ಪ್ರಜೆಗಳನ್ನು ಬಲಿಕೊಟ್ಟು ಭಟ್ಟಂಗಿಗಳನ್ನು ಒಳಗಿಟ್ಟುಕೊಂಡರೆ ಸಾಮ್ರಾಜ್ಯ ಎಷ್ಟು ದಿನ ಉಳಿದೀತು ಎಂದು ಪ್ರಶ್ನಿಸಿದ್ದಾರೆ.
ಬಿಎಸ್ವೈ ಅವರನ್ನು ಕೆಳಗಿಳಿಸುವ ಪ್ರಯತ್ನವೊಂದು ಪಕ್ಷದೊಳಗೇ ನಡೆಯುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆಗಳು ಒಂದು ಗಮನಾರ್ಹ ಬದಲಾವಣೆಯ ಸಾಧ್ಯತೆಯ ಸುಳಿವು ನೀಡುತ್ತಿರುವುದಂತೂ ಸುಳ್ಳಲ್ಲ.