ART LITERATURE:
ನಾನು ಮನುಷ್ಯನಾಗುತ್ತಿರಲಿಲ್ಲ
ಮುಡಿಗೇರಿದ ಗುಲಾಬಿಗಷ್ಟೇ ಅಲ್ಲ
ರಕ್ತ ಬಸಿದ ಮುಳ್ಳು ಮೊನೆಗಳಿಗೂ
ಮನಬಯಲು ಹಾಸಿದ್ದೇನೆ
ಹಾಗಾಗದಿದ್ದರೆ
ಪ್ರೀತಿ ಟಿಸಿಲೊಡೆಯುತ್ತಿರಲಿಲ್ಲ
ಬೊಗಸೆಯಲ್ಲಿ ದಕ್ಕಿದ್ದಕ್ಕಷ್ಟೇ ಅಲ್ಲ
ಬೆರಳ ಸಂದಿಯಲ್ಲಿ ಸೋರಿಹೋದದಕ್ಕೂ
ಎದೆಮಡಕೆಯಲಿ ಜಾಗವಿದೆ
ಹಾಗಿಲ್ಲದಿದ್ದರೆ
ಭಾವ ತೊಟ್ಟಿಕ್ಕುತ್ತಿರಲಿಲ್ಲ
ಗೂಡು ಕಟ್ಟುವ ವಸಂತದ ಹಾಡುಗಳಿಗಷ್ಟೇ ಅಲ್ಲ
ಶಿಶಿರದ ಬೋಳು ಕಾಡುಗಳಿಗೂ
ಒಳಕುಡಿಕೆಯಲಿ ಹಸಿರಿದೆ
ಅದಿರದಿದ್ದರೆ
ಯುಗಳ ಗೀತೆ ಉಸಿರಾಡುತ್ತಿರಲಿಲ್ಲ
ಬೆಳಕ ಬೆರಗ ಬರೆವ ದೀಪಕ್ಕಷ್ಟೇ ಅಲ್ಲ
ಸುಟ್ಟು ಕರಕಲಾಗಿಸುವ ಬೆಂಕಿಗೂ
ಆತ್ಮದ ಪಣತಿಯಲ್ಲಿ ತೈಲವಿದೆ
ಅದು ಬಸಿದು ಹೋಗಿದ್ದರೆ
ಕಣ್ಣ ಹೊಳಪು ಕುಣಿದಾಡುತ್ತಿರಲಿಲ್ಲ
ಭಿಕ್ಷೆಯಿತ್ತ ನಿಮ್ಮ ಪ್ರೀತಿಗಷ್ಟೇ ಅಲ್ಲ
ಕರುಣೆಯಿಂದ ಕಕ್ಕಿದ ದ್ವೇಷಕ್ಕೂ
ನಾನು ಋಣಿ
ನೀವು ಹಾಗೆ ಮಾಡದಿದ್ದರೆ
ಬಹುಶಃ
ನಾನು ಮನುಷ್ಯನಾಗುತ್ತಿರಲಿಲ್ಲ
-ಚನ್ನಬಸವ ಆಸ್ಪರಿ
aspari.1982@gmail.com