ART LITERATURE:
ಒಂದು ದಿನ ಒಂದು ಹೊಟ್ಟೆಬಾಕ ತೋಳ ಮಾಂಸವನ್ನು ಗಬಗಬನೆ ಬಾಯಿಗೆ ತುರುಕಿಕೊಂಡು ಅಗಿಯದೆ ಹಾಗೇ ನುಂಗುತ್ತಿತ್ತು. ಆಗ ಮೂಳೆಯ ಚೂರು ಅದರ ಗಂಟಲ್ಲಲ್ಲಿ ಸಿಕ್ಕಿಕೊಂಡಿತು. ಅದರಿಂದಾಗಿ ಆ ತೋಳ ತುಂಬಾ ಸಂಕಟಪಟ್ಟಿತು. ಕಣ್ಣಿನ್ನಲ್ಲಿ ನೀರು ತಂದುಕೊಂಡಿತು. ಯಾರಾದರೂ ನನ್ನ ಗಂಟಲಲ್ಲಿ ಸಿಲುಕಿರುವ ಮೂಳೆಯನ್ನು ತೆಗೆದು ಜೀವ ಉಳಿಸಿ ಎಂದು ಬೇಡಿಕೊಂಡಿತು. ಆದರೆ ತೋಳದ ಮಾತಿಗೆ ಕಾಡಿನ ಪಶು, ಪಕ್ಷಿಗಳ ಮನಸ್ಸು ಕರಗಲಿಲ್ಲ. ಕೊನೆಗೆ ಕೊಕ್ಕರೆಯೊಂದು ಅಯ್ಯೋ ಎನ್ನುತ್ತಾ ತೋಳದ ಬಳಿ ಬಂತು. ತೋಳಪ್ಪಾ, ದೊಡ್ಡದಾಗಿ ಬಾಯಿ ತೆಗೆ ಎಂದಿತು. ತೋಳ ಬಾಯಿ ತೆರೆದು ಕಣ್ಣು ಮುಚ್ಚಿಕೊಂಡಿತು. ಆಗ ಕೊಕ್ಕರೆ ತನ್ನ ಉದ್ದವಾದ ಕೊಕ್ಕಿನಲ್ಲಿ ಗೇಣುದ್ದದ ಮರದ ತುಂಡೊಂದನ್ನು ತೆಗೆದುಕೊಂಡು ತೋಳದ ಬಾಯೊಳಗೆ ಅಡ್ಡಲಾಗಿ ಇಟ್ಟಿತು. ನಂತರ ತನ್ನ ಕೊಕ್ಕುಚಾಚಿ ಅದರ ಬಾಯೊಳಗಿದ್ದ ಮೂಳೆಯ ಚೂರನ್ನು ಹೊರತೆಗೆದು ತೋಳಕ್ಕೆ ತೋರಿಸಿತು.
ಆ ಬಳಿಕ ತೋಳದ ಬಾಯಲ್ಲಿ ಸಿಕ್ಕಿಸಿದ್ದ ಕಡ್ಡಿಯನ್ನು ದೂಡಿತು. ಕಡ್ಡಿ ಕೆಳಗೆ ಕಳಚಿ ಬೀಳುವುದರೊಳಗೆ ತೋಳ ತಟ್ಟನೆ ಬಾಯಿ ಮುಚ್ಚಿತು. ಸದ್ಯ ಬಾಯೊಳಗೆ ಕಡ್ಡಿಯಿಟ್ಟಿದ್ದು ಒಳ್ಳೆದಾಯಿತು ಎಂದುಕೊಳ್ಳುತ್ತಲೇ ಕೊಕ್ಕರೆ ತೋಳವನ್ನು ಉದ್ದೇಶಿಸಿ ಹೀಗೆ ಹೇಳಿತು. ನೀನು ಹೇಳಿದಂತೆ ಬಹುಮಾನವನ್ನು ಕೊಟ್ಟರೆ ನಾನಿನ್ನು ಹೊರಡುವೆ ಎಂದಿತು. ಆಗ ತೋಳ ನಗುತ್ತಾ ನಿನಗೆ ಬಹುಮಾನವೇ? ಎಂದಿತು. ಕೊಕ್ಕರೆ ಪೆಚ್ಚು ಮುಖ ಮಾಡಿಕೊಂಡು ತನ್ನ ಗೂಡಿಗೆ ಹಾರಿಹೋಯಿತು.
ನೀತಿ: ಮಾಡಿದ ಉಪಕಾರವನ್ನು ನೆನೆಯಬೇಕೇ ಹೊರತು ಪ್ರತಿಫಲವನ್ನು ನಿರೀಕ್ಷಿಸಬಾರದು