BANGALORE URBAN: 2ನೇ ಪಿಯುಸಿ ಪರೀಕ್ಷೆಯನ್ನು ಆನ್‍ಲೈನ್‍ನಲ್ಲಿ ನಡೆಸಲು ಸಾಧ್ಯವಿದೆಯೇ ಎಂದು ಪಿಯು ಇಲಾಖೆ ಪರಿಶೀಲಿಸುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ತರಗತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ, ಪ್ರಮುಖ ವಿಷಯಗಳಲ್ಲಿ 90 ನಿಮಿಷಗಳ ಪರೀಕ್ಷೆ ನಡೆಸಬಹುದು ಹಾಗೂ ಬಹು ಆಯ್ಕೆ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎನ್ನುವ ಸಲಹೆಗಳು ಇಲಾಖೆಗೆ ಬಂದಿವೆ. ಆದರೆ, ಆನ್‍ಲೈನ್ ಪರೀಕ್ಷೆ ನಡೆಸಲು ಅಂತರ್ಜಾಲ ಸಂಪರ್ಕ, ವಿದ್ಯುತ್ ಸಂಪರ್ಕ, ಮಾತ್ರವಲ್ಲದೆ ಮೂಲಭೂತ ವ್ಯವಸ್ಥೆಯ ಕೊರತೆ ಇದೆ. ಇದನ್ನು ನಿವಾರಿಸಲು ಎಂಜಿನಿಯರಿಂಗ್ ಕಾಲೇಜುಗಳನ್ನು ಬಳಸಿಕೊಳ್ಳಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆನ್‍ಲೈನ್ ಶಿಕ್ಷಣ ತಾರತಮ್ಯಕ್ಕೆ ಕಾರಣವಾಗುತ್ತಿದೆ ಎನ್ನುವ ದೂರು ವ್ಯಾಪಕವಾಗಿದೆ. ಕಳೆದ ವರ್ಷ 5,56,267 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದೇನೂ ಸಣ್ಣ ಸಂಖ್ಯೆಯಲ್ಲ ಹಾಗೂ ಇವರೆಲ್ಲರಿಗೆ, ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಆನ್‍ಲೈನ್ ಪರೀಕ್ಷೆಗೆ ಬೇಕಾದ ಮೂಲಸೌಲಬ್ಯ ಪೂರೈಸುವುದು ಭಾರಿ ದೊಡ್ಡ ಸವಾಲು.