ಧರ್ಮಶಾಲಾ, ದೆಹಲಿಯಲ್ಲಿ ಟೆಸ್ಟ್‌ ಪಂದ್ಯ

ಧರ್ಮಶಾಲಾ, ದೆಹಲಿಯಲ್ಲಿ ಟೆಸ್ಟ್‌ ಪಂದ್ಯ

ನವದೆಹಲಿ: ಮುಂದಿನ ವರ್ಷ ಫೆಬ್ರುವರಿ- ಮಾರ್ಚ್‌ ತಿಂಗಳಲ್ಲಿ ನಡೆಯಲಿರುವ ಭಾರತ- ಆಸ್ಟ್ರೇಲಿಯಾ ನಡುವಣ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಒಂದು ಪಂದ್ಯಕ್ಕೆ ನವದೆಹಲಿ ಆತಿಥ್ಯ ವಹಿಸಲಿದೆ.

ಇತರ ಮೂರು ಪಂದ್ಯಗಳು ಧರ್ಮಶಾಲಾ, ಅಹಮದಾಬಾದ್‌ ಮತ್ತು ಚೆನ್ನೈನಲ್ಲಿ ನಡೆಯಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐ ರೊಟೇಷನ್‌ ಪದ್ಧತಿಯಂತೆ ದೆಹಲಿಗೆ ಐದು ವರ್ಷಗಳ ಬಿಡುವಿನ ಬಳಿಕ ಟೆಸ್ಟ್‌ ಆತಿಥ್ಯ ದೊರೆತಿದೆ. 2017ರ ಡಿಸೆಂಬರ್‌ನಲ್ಲಿ ಭಾರತ- ಶ್ರೀಲಂಕಾ ನಡುವಿನ ಪಂದ್ಯವೇ ಇಲ್ಲಿ ನಡೆದ ಕೊನೆಯ ಟೆಸ್ಟ್‌ ಆಗಿದೆ.

'ಸರಣಿಯ ಎರಡನೇ ಪಂದ್ಯ ದೆಹಲಿಯಲ್ಲಿ ನಡೆಯುವ ಸಾಧ್ಯತೆಯಿದೆ. ಮೂರನೇ ಟೆಸ್ಟ್‌ ಧರ್ಮಶಾಲಾದಲ್ಲಿ ನಡೆಯಬಹುದು. ಮೊದಲ ಟೆಸ್ಟ್‌ ಚೆನ್ನೈ ಅಥವಾ ಹೈದರಾಬಾದ್‌ನಲ್ಲಿ ಆಯೋಜಿಸಬೇಕೇ ಎಂಬ ಬಗ್ಗೆ ನಿರ್ಧಾರ ಆಗಿಲ್ಲ. ಕೊನೆಯ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಸರಣಿಯ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ' ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ಭಾರತ- ಶ್ರೀಲಂಕಾ ಟೆಸ್ಟ್‌ ನಡೆದಿತ್ತು. ಆದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಆತಿಥ್ಯಕ್ಕೆ ಬೆಂಗಳೂರನ್ನು ಪರಿಗಣಿಸಿಲ್ಲ.

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಯಾವ ಪಂದ್ಯವನ್ನು ಹೊನಲು ಬೆಳಕಿನಡಿ (ಪಿಂಕ್‌ ಬಾಲ್‌) ನಡೆಸಬೇಕು ಎಂಬುದು ಇನ್ನೂ ತೀರ್ಮಾನ ಆಗಿಲ್ಲ.

ಬಿಸಿಸಿಐ ಇದುವರೆಗೆ ಮೂರು ಪಿಂಕ್‌ ಬಾಲ್‌ ಟೆಸ್ಟ್‌ಗಳನ್ನು ಆಯೋಜಿಸಿದ್ದು ಈಡನ್ ಗಾರ್ಡನ್ಸ್‌, ಮೊಟೇರಾ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿವೆ.