BREAKING NEWS:
ದೇಶದಲ್ಲಿ ಅತ್ಯಂತ ಹೆಚ್ಚು ವೃದ್ಧರಿರುವ ರಾಜ್ಯ ಕೇರಳ. ಶೇ. 16.5ರಷ್ಟು ವೃದ್ಧರು ಕೇರಳವೊಂದರಲ್ಲಿಯೇ ಇದ್ದಾರೆ. ನಂತರದ ರಾಜ್ಯಗಳೆಂದರೆ, ತಮಿಳ್ನಾಡು (ಶೇ.13.6), ಹಿಮಾಚಲ ಪ್ರದೇಶ (ಶೇ. 13.1), ಪಂಜಾಬ್ (ಶೇ. 12.6) ಮತ್ತು ಆಂಧ್ರಪ್ರದೇಶ (ಶೇ. 12.4).
ನವದೆಹಲಿ: ಇನ್ನೊಂದು ದಶಕದಲ್ಲಿ ಭಾರತದ ವೃದ್ಧ (60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಜನಸಂಖ್ಯೆಯು 19.4 ಕೋಟಿ ಮುಟ್ಟುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ ಪ್ರಕಟಿಸಿರುವ ವರದಿ ಈ ಅಂಶವನ್ನು ಹೊರಹಾಕಿದ್ದು, ಈಗ ಅಂದರೆ 2021ರಲ್ಲಿ 13.8 ಕೋಟಿ ವೃದ್ಧರಿದ್ದಾರೆ. 2031ರ ವೇಳೆಗೆ ಈ ಸಂಖ್ಯೆಯಲ್ಲಿ ಶೇ. 41ರಷ್ಟು ಏರಿಕೆಯಾಗಲಿದೆ.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮೀರಿಸುವಷ್ಟು ಮಟ್ಟಿಗೆ ವೃದ್ಧರ ಸಂಖ್ಯೆ ದೇಶದಲ್ಲಿ ಹೆಚ್ಚಲಿದೆ.
2017ರಲ್ಲಿ ಅಮೆರಿಕಾ ಬಿಡುಗಡೆ ಮಾಡಿದ್ದ ವಿಶ್ವ ವೃದ್ಧ ಜನಸಂಖ್ಯೆ ಕುರಿತ ವರದಿ ಕೂಡ 2030ರ ಹೊತ್ತಿಗೆ 60 ವರ್ಷ ಮತ್ತದಕ್ಕಿಂತ ಮೇಲ್ಪಟ್ಟವರ ಸಂಖ್ಯೆ 10 ವರ್ಷದೊಳಗಿನ ಮಕ್ಕಳ ಸಂಖ್ಯೆಯನ್ನು ಮೀರಿಸಲಿದೆ ಎಂಬ ವಿಚಾರವನ್ನೇ ಹೇಳಿತ್ತೆಂಬುದನ್ನು ಗಮನಿಸಬೇಕು.
ಜನಸಂಖ್ಯೆಯಲ್ಲಿನ ಇಂಥದೊಂದು ಸ್ವರೂಪ ಕಳವಳಕಾರಿಯಾದುದಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನ ಯೋಜನೆಯನ್ನು ರೂಪಿಸಬೇಕಾದ ಅಗತ್ಯವು ದೇಶದೆದುರು ಇದೆ ಎಂಬುದನ್ನು ವರದಿ ಒತ್ತಿಹೇಳಿದೆ.
ವೃದ್ಧ ಜನಸಂಖ್ಯೆಯಲ್ಲಿ ಪ್ರಸ್ತು 6.7 ಕೋಟಿ ಪುರುಷರು ಮತ್ತು 7.1 ಕೋಟಿ ಮಹಿಳೆಯರಿದ್ದು, 2031ರಲ್ಲಿ ವೃದ್ಧ ಪುರುಷರ ಸಂಖ್ಯೆ 9.3 ಕೋಟಿ ಹಾಗೂ ವೃದ್ಧ ಮಹಿಳೆಯರ ಸಂಖ್ಯೆ 10.1 ಕೋಟಿ ಮುಟ್ಟಲಿದೆ.
10 ವರ್ಷದ ಕೆಳಗೆ ಅಂದರೆ 2011ರಲ್ಲಿ 10.4 ಕೋಟಿಯಿದ್ದ ವೃದ್ಧ ಜನಸಂಖ್ಯೆ ಈಗ 3.4 ಕೋಟಿ ಏರಿಕೆಯಾಗಿದ್ದು, ಇನ್ನೊಂದು ದಶಕದಲ್ಲಿ ಇದು 5.6 ಕೋಟಿ ಹೆಚ್ಚಳವಾಗಲಿದೆ. ಅಂದರೆ 2011ರಲ್ಲಿ ಒಟ್ಟು ಜನಸಂಖ್ಯೆಯ ಶೇ. 8.6ರಷ್ಟಿದ್ದ ವೃದ್ಧರ ಸಂಖ್ಯೆ 2021ರಲ್ಲಿ ಶೇ. 10.1ರಷ್ಟು ಹೆಚ್ಚಿದೆ. 2031ರ ವೇಳೆಗೆ ಶೇ.13.1ರಷ್ಟು ಹೆಚ್ಚಳ ಕಾಣಲಿದೆ.
ವರದಿಯ ಪ್ರಕಾರ, ದೇಶದಲ್ಲಿ ಅತ್ಯಂತ ಹೆಚ್ಚು ವೃದ್ಧರಿರುವ ರಾಜ್ಯ ಕೇರಳ. ಶೇ. 16.5ರಷ್ಟು ವೃದ್ಧರು ಕೇರಳವೊಂದರಲ್ಲಿಯೇ ಇದ್ದಾರೆ. ಹೆಚ್ಚು ವೃದ್ಧರಿರುವ ಕೇರಳದ ನಂತರದ ರಾಜ್ಯಗಳೆಂದರೆ, ತಮಿಳ್ನಾಡು (ಶೇ.13.6), ಹಿಮಾಚಲ ಪ್ರದೇಶ (ಶೇ. 13.1), ಪಂಜಾಬ್ (ಶೇ. 12.6) ಮತ್ತು ಆಂಧ್ರಪ್ರದೇಶ (ಶೇ. 12.4).
ಇನ್ನು ಅತ್ಯಂತ ಕಡಿಮೆ ವೃದ್ಧರಿರುವ ರಾಜ್ಯಗಳ ಸಾಲಿನಲ್ಲಿ ಬಿಹಾರ (ಶೇ. 7.7), ಉತ್ತರ ಪ್ರದೇಶ (ಶೇ. 8.1) ಮತ್ತು ಅಸ್ಸಾಂ (ಶೇ. 8.2) ಇವೆ.
ಈಗ ಅತಿ ಹೆಚ್ಚು ವೃದ್ಧರಿರುವ ಅದೇ ಐದು ರಾಜ್ಯಗಳು ಇನ್ನೊಂದು ದಶಕದಲ್ಲಿ ತಮ್ಮ ಒಟ್ಟು ಜನಸಂಖ್ಯೆಯಲ್ಲಿ ಗರಿಷ್ಠ ಪ್ರಮಾಣದ ವೃದ್ಧರನ್ನು ಹೊಂದಲಿವೆ. ಅದರಂತೆ ಕೇರಳ ಶೇ. 20.9, ತಮಿಳುನಾಡು ಶೇ. 18.2, ಹಿಮಾಚಲ ಪ್ರದೇಶ ಶೇ. 17.1, ಆಂಧ್ರಪ್ರದೇಶ ಶೇ. 16.4 ಮತ್ತು ಪಂಜಾಬ್ ಶೇ 16.2ರಷ್ಟು ವೃದ್ಧರನ್ನು ಒಳಗೊಂಡಿರಲಿದೆ.
ವೃದ್ಧರ ಅವಲಂಬನೆ ಅನುಪಾತದಲ್ಲಿಯೂ ದಶಕದಿಂದ ದಶಕಕ್ಕೆ ಹೆಚ್ಚಳವಾಗುತ್ತಲೇ ಬಂದಿರುವುದನ್ನೂ ವರದಿ ಉಲ್ಲೇಖಿಸಿದೆ. 2011ರಲ್ಲಿ ಶೇ. 14.2ರಷ್ಟಿದ್ದ ಅವಲಂಬನೆ ಪ್ರಮಾಣ 2021ರಲ್ಲಿ ಶೇ.15.7ರಷ್ಟಾಗಿದೆ. 2031ರಲ್ಲಿ ಇದು ಶೇ. 20.1ಕ್ಕೆ ಏರಲಿದೆ.
ಪ್ರಸ್ತುತ, ಅವಲಂಬಿತ ವೃದ್ಧೆಯರ ಪ್ರಮಾಣ ಶೆ. 14.8ರಷ್ಟಿದ್ದರೆ, ವೃದ್ಧರ ಪ್ರಮಾಣ 16.7ರಷ್ಟಿದೆ.
ವೃದ್ಧಾಪ್ಯ ಅವಲಂಬನೆಯ ಅನುಪಾತವನ್ನು 15-59 ವಯಸ್ಸಿನ ಗುಂಪಿಗೆ ಸಂಬಂಧಿಸಿದಂತೆ 100 ವ್ಯಕ್ತಿಗಳಿಗೆ ಇರುವ 60 ಮತ್ತು ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳ ಸಂಖ್ಯೆ ಎಂದು ವ್ಯಾಖ್ಯಾನಿಸಲಾಗುತ್ತದೆ.