BREAKING NEWS:
ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಕಳೆದ 8 ವರ್ಷಗಳಲ್ಲಿ ಹುಲಿಗಳ ಸಂತತಿ ಶೇ.87.50 ರಷ್ಟು ಹೆಚ್ಚಳವಾಗಿದೆ.
ಜಿಲ್ಲೆಯ ಎಚ್ .ಡಿ. ಕೋಟೆ ತಾಲೂಕು ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಜಾಗತಿಕ ಹುಲಿ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ .ಪಿ. ಮಹಾದೇವ್ ಈ ವಿಷಯ ತಿಳಿಸಿದರು.
2007ರಲ್ಲಿ 643.39 ಚ.ಕಿ.ಮೀ ವ್ಯಾಪ್ತಿಯನ್ನು ಗುರುತಿಸಿ, ಅದನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ನಾಗರಹೊಳೆಯಲ್ಲಿ ಆನೆಗಳ ಸಂಖ್ಯೆ ಕೂಡ ಹೆಚ್ಚಾಗಿತು. ಆದ್ದರಿಂದ 2019ರಲ್ಲಿ ಇಲ್ಲಿಗೆ 200.57 ಚ.ಕಿ.ಮೀ ಬಫರ್ ಪ್ರದೇಶವನ್ನು ಸೇರಿಸಿ ಒಟ್ಟು 843.93 ಚ.ಕಿ.ಮೀ ಪ್ರದೇಶವನ್ನು ಗುರುತಿಸಲಾಗಿದೆ. 2014ರ ಗಣತಿಯಲ್ಲಿ ಒಟ್ಟು 72 ಹುಲಿಗಳು ಮತ್ತು 2018ರಲ್ಲಿ 125 ಹುಲಿಗಳು ಹಾಗೂ 2020 ರಲ್ಲಿ 135 ಹುಲಿಗಳು ಕಂಡುಬಂದಿದ್ದು, ಹುಲಿಗಳ ಸಂಖ್ಯೆ ಕಳೆದ 8 ವರ್ಷಗಳಲ್ಲಿ ಶೇ.87.50 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಇದೇ ವೇಳೆ ನಾಗರಹೊಳೆಯ ನೂತನ ಲಾಂಚನವನ್ನು ಉದ್ಘಾಟಿಸಿ ಮಾತನಾಡಿದ, 2010ರಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ 13 ರಾಷ್ಟ್ರಗಳ ಮುಖಂಡರು ಸಭೆ ಸೇರಿ ಜುಲೈ 29ರಂದು ವಿಶ್ವ ಹುಲಿ ದಿನಾಚರಣೆ ಎಂದು ಘೋಷಿಸಲಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ವೀಕ್ಷಕ ಹುದ್ದೆಯಿಂದ ಅರಣ್ಯ ರಕ್ಷಕ ಹುದ್ದೆಗೆ ಬಡ್ತಿ ಹೊಂದಿದ 14ಜನ ಸಿಬ್ಬಂದಿಗಳಿಗೆ ಸ್ಟಾರ್ ಕ್ಲಿಪ್ಪಿಂಗ್ ಮಾಡಲಾಯಿತು. ಅಲ್ಲದೇ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸೈಕಲ್ ಜಾಥ ನಡೆಸಿದ ಬೆಂಗಳೂರಿನ ಪರಿಕ್ರಮ ತಂಡ ಮತ್ತು ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ನಾಹರಹೊಳೆ ಡಿಸಿಎಫ್ ಡಿ.ಮಹೇಶ್ ಕುಮಾರ್, ಸಹಾಯಕ ಡಿಸಿಎಫ್ ಗಳಾದ ಎ.ವಿ.ಸತೀಶ್, ಕೆ.ಪಿ.ಗೋಪಾಲ್, ವಲಯ ಅರಣ್ಯಾಧಿಕಾರಿಗಳಾದ ಎಸ್.ಎಸ್.ಸಿದ್ದರಾಜು, ಸಂತೋಷ ಹೂಗಾರ್, ಮಧು, ನಮನನಾಯಕ್, ಗಿರೀಶ್, ಹನುಮಂತ ರಾಜು, ಕಿರಣ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.