BREAKING NEWS: ಧಾರವಾಡ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಕಂಬಾರಗಣವಿ ಸೇತುವೆ ಮುಳುಗಡೆಯಾಗಿದ್ದು, ಗ್ರಾಮಸ್ಥರೇ ಹಣ ಕೂಡಿಸಿಕೊಂಡು ಸೇತುವೆ ಸ್ವಚ್ಚ ಮಾಡಿಸಿಕೊಂಡಿದ್ದಾರೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ. ಕಳೆದ ಐದಾರು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಹೊಲ, ಗದ್ದೆಗಳಿಂದ ನೀರು ಹೊರಬರುತ್ತಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಅದೇ ರೀತಿ ವಿಪರೀತ ಮಳೆಯಿಂದಾಗಿ 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಂಬಾರಗಣವಿ ಸೇತುವೆ ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ. ಈ ಸೇತುವೆ ಜಲಾವೃತವಾದರೆ ಆಕಡೆ ಜನ ಆಕಡೆ, ಈ ಕಡೆ ಜನ ಈ ಕಡೆ ನಿಲ್ಲುವ ಪರಿಸ್ಥಿತಿ ಪ್ರತಿ ಭಾರಿ ಮಳೆಗಾಲದಲ್ಲಿ ಈ ಭಾಗದ ಗ್ರಾಮಸ್ಥರಿಗೆ ಬಂದೊದಗುತ್ತಿದೆ. ಹಲವಾರು ವರ್ಷಗಳಿಂದ ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಒತ್ತಾಯ ಇದ್ದರೂ ಆ ಕಾರ್ಯಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ. ನೀರಿನ ರಭಸಕ್ಕೆ ಮರದ ಕೊಂಬೆಗಳು ತೇಲಿ ಬಂದು ಬ್ರಿಜ್ ಮೇಲೆ ನಿಂತಿವೆ. ಇದರಿಂದ ನೀರಿನ ಹರಿವು ಕಡಿಮೆಯಾಗುವವರೆಗೂ ಜನ ನಿಂತ ಜಾಗದಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿದ್ದು, ಗ್ರಾಮಸ್ಥರೇ ತಮ್ಮ ತಮ್ಮಲ್ಲಿ ಹಣ ಕೂಡಿಸಿಕೊಂಡು, ಜೆಸಿಬಿ ಹಾಗೂ ಗ್ರಾಮಸ್ಥರು ಕೂಡಿಕೊಂಡು ಸೇತುವೆ ಮೇಲಿನ, ಕಸ ಸೇರಿದಂತೆ ಮಣ್ಣನ್ನು ಸ್ವಚ್ಚಮಾಡಿದ್ದಾರೆ.